×
Ad

ಸಿಎಂ ಖುರ್ಚಿ ಉಳಿಸಿಕೊಳ್ಳಲು ಆರೆಸೆಸ್ಸ್ ತಾಳಕ್ಕೆ ಕುಣಿಯುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2022-02-12 14:13 IST

ಕಲಬುರಗಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಆರೆಸೆಸ್ಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ಮೊದಲು ಅವರು ತುಂಬಾ ಪ್ರೊಗ್ರೆಸಿವ್ ( ಪ್ರಗತಿಪರ ) ಆಗಿದ್ದರು. ಆದರೆ ಈಗ ಎಷ್ಟು ದಿನ‌ ಸಿಎಂ ಖುರ್ಚಿ ಇರುತ್ತದೆಯೋ ಅಷ್ಟು ದಿನ‌ ಆರೆಸೆಸ್ಸ್ ಮಾತು ಕೇಳುತ್ತಾ ಅವರ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಹಾಗೂ‌ ಕೆಪಿಸಿಸಿ‌ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ  ಹಿಜಾಬ್ ವಿವಾದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಬ್ಬಿದ್ದು, ಹೀಗೆ ಹರಿಬಿಟ್ಟಿದ್ದು ಯಾರು ? ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಚಿತ್ತಾಪುರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಮೂರು ಅಲೆಗಳಿಂದ ಶಾಲೆಗಳು ಬಂದ್ ಆಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಆದರೂ ಕೂಡಾ ಈಗ ಎದ್ದಿರುವ ವಿವಾದದಿಂದಾಗಿ ಶಾಲೆ ಬಂದ್ ಮಾಡುವ ನಿರ್ಧಾರವನ್ನ  ಶಾಲಾ ಸಮಿತಿಗೆ ಬಿಡಲಾಗಿದೆ. ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ಗಾಂಭೀರ್ಯತೆ ಇಲ್ಲದ ಸರ್ಕಾರ ಕತ್ತೆ ಕಾಯುತ್ತಿದೆಯಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಕೇಸರಿ ಶಾಲು ಹಂಚುತ್ತಿರುವುದು ಯಾರು ? ರಾಷ್ಟ್ರ ಧ್ವಜ ಸ್ಥಂಬದಲ್ಲಿ ಕೇಸರಿ ಧ್ಚಜ ಹಾರಿಸಿದ್ದು ಯಾರು? ಈ ಬಗ್ಗೆ ಮಾಹಿತಿ‌ ಇಲ್ಲವೇ? ಗೃಹ ಸಚಿವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ‌.  ಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಕುಸಿಯುತ್ತದೆ ಎಂದರು.

ಕೇಸರಿ ತ್ಯಾಗ ಸಂಕೇತ ಎಂದು ಹೇಳಲಾಗುತ್ತಿದೆಯಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಕೇರಳ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಈ‌ ವಿಚಾರದಲ್ಲಿ ಸ್ಪಷ್ಟಪಡಿಸಿದೆ. ಕೈಬಳೆ, ಕುಂಕುಮ, ತಾಯತ, ಹಿಜಾಬ್ ಹಾಗೂ ಸಿಖ್ಖರ ಟರ್ಬನ್ ( ಪೇಟ )  ಆಯಾ ಧರ್ಮದ ಸಂಪ್ರದಾಯಗಳು ಎಂದು ಹೇಳಿವೆ. ಆದರೆ ಕೇಸರಿ‌ ಶಾಲು ಏನು ? ಇದು ಯಾವ ಧರ್ಮದ ಸಂಕೇತ ? ಇದು ಕೇವಲ ರಾಜಕೀಯ ಪ್ರೇರಿತ ಸಂಕೇತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News