ಭಾಷಿಕ ಭ್ರಷ್ಟಾಚಾರ ಕನ್ನಡ ಭಾಷೆಗೆ ಅವಮಾನ: ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಫೆ.12: ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕ ಭ್ರಷ್ಟಾಚಾರ ಮಾತ್ರ ನಡೆಯುತ್ತಿಲ್ಲ, ಭಾಷಿಕ ಭ್ರಷ್ಟಾಚಾರ ಕೂಡ ನಡೆಯುತ್ತಿದೆ. ಅನಗತ್ಯವಾಗಿ ಸೃಷ್ಟಿಯಾಗುತ್ತಿರುವ ಈ ಭ್ರಷ್ಟಾಚಾರದಿಂದ ಕನ್ನಡ ಭಾಷೆಗೆ ಅವಮಾನವಾಗುತ್ತಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.
ಶನಿವಾರ ನಗರದ ಎನ್‍ಆರ್ ಕಾಲನಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ಕನ್ನಡಿಗರು ತಲೆತಗ್ಗಿಸುವ ವಾತಾವರಣ ಸೃಷ್ಟಿಯಾಗಿದೆ. ಮಾತು ಹಾಗೂ ಮೆದುಳು ಭ್ರಷ್ಟ್ರ ಆಗಿರುವುದರಿಂದ ಭಾಷೆಯೂ ಭ್ರಷ್ಟವಾಗಿದೆ ಎಂದು ಹೇಳಿದರು.
ಧರ್ಮ ಮತ್ತು ರಾಜಕಾರಣವನ್ನು ಬೆರಸಬಾರದು ಎಂಬ ಕಾರಣಕ್ಕೆ ಹತ್ತನೆಯ ಶತಮಾನದಲ್ಲಿಯೇ ಪಂಪನು ಎರಡು ಕೃತಿಗಳನ್ನು ಬರೆದಿದ್ದಾನೆ. ಧರ್ಮಕ್ಕೆ ಆದಿ ಪುರಾಣವನ್ನು, ಲೌಕಿಕ(ರಾಜಕಾರಣ)ಕ್ಕೆ ವಿಕ್ರಮಾರ್ಜುನ ವಿಜಯಂ ಕೃತಿಯನ್ನು ಬರೆದಿದ್ದಾನೆ. ಹಾಗಾಗಿ ಧರ್ಮ ಮತ್ತು ರಾಜಕೀಯವನ್ನು ಬರೆಸದ ಈ ತತ್ವವು ಇಪ್ಪತ್ತೊಂದನೆಯ ಶತಮಾನದ ರಾಜಕಾರಣಿಗಳಿಗೆ ಆದರ್ಶವಾಗಬೇಕು ಎಂದು ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ವಿವಾದ ದಿನೇದಿನೇ ಹೆಚ್ಚುತ್ತಿದೆ. ಈ ವಿವಾದದಿಂದ ತಪ್ಪಿಸಿಕೊಳ್ಳಲು ಒಬ್ಬರು ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅಂದಾಜು 4 ಕೋಟಿ ರೂ.ಗಳ ಅನುದಾನವನ್ನು ಇನ್ನೂ ಕನ್ನಡ ವಿವಿಗೆ ಸರಕಾರವು ಪಾವತಿಸಿಲ್ಲ. ಹಾಗಾಗಿ ವಿವಿಯು ವಿದ್ಯುತ್, ನೀರಿನ ಬಿಲ್ ಸೇರಿದಂತೆ ವೇತನ ಪಾವತಿಯನ್ನು ಮಾಡುತ್ತಿಲ್ಲ. ಕಳೆದ 36 ತಿಂಗಳಿನಿಂದ ಸಂಶೋಧನ ವಿದ್ಯಾರ್ಥಿಗಳಿಗೆ ವೇತನವನ್ನೇ ಪಾವತಿಸಿಲ್ಲ. ಹಾಗಾಗಿ ವಿವಾದವನ್ನು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರೊ. ಗುರುಲಿಂಗ ಕಾಪಸೆ ಅವರಿಗೆ 2021ರ ಸಾಲಿನ ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.