ಚಿಕ್ಕಮಗಳೂರು: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಲಂಚ ಆರೋಪ; ತನಿಖೆಗೆ ಸಚಿವ ಈಶ್ವರಪ್ಪ ಸೂಚನೆ

Update: 2022-02-12 13:37 GMT

ಚಿಕ್ಕಮಗಳೂರು, ಜ.12: ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಇಲಾಖಾಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಲಂಚ ನೀಡದಿದ್ದರೆ ಮಾನ್ಯತೆ ನವೀಕರಣ ಮಾಡಲು ಸತಾಯಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಎಂದು ವಿವಿಧ ಕ್ಷೇತ್ರಗಳ ಶಾಸಕರು ಮಾಡಿದ ಆರೋಪ ಶನಿವಾರ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು.

ಜಿಲ್ಲಾಪಂಚಾಯತ್ ಕಚೇರಿಯ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಕಡೂರು ಶಾಸಕ ಬೆಳ್ಳಿಪ್ರಕಾಶ್ ಹಾಗೂ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ, ಶಿಕ್ಷಣ ಇಲಾಖಾಧಿಕಾರಿಗಳ ಭ್ರಷ್ಟಾಚಾರ ಸಂಬಂಧ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಸ್.ಎಲ್.ಭೋಜೇಗೌಡ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣಕ್ಕೆ ಜಿಲ್ಲೆಯಲ್ಲಿ ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಇಲಾಖಾಧಿಕಾರಿಗಳು ಹಾಗೂ ಕೆಲ ಸಿಬ್ಬಂದಿ ಮೂರು ಸಂಸ್ಥೆಗಳಿಂದ ತಲಾ 50 ಸಾವಿರ ರೂ. ಲಂಚ ಪಡೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ಬಳಿಕ ಸಂಬಂಧಿಸಿದವರನ್ನು ಕಚೇರಿಗೆ ಕರೆಸಿ ಹಣವನ್ನು ಹಿಂದಿರುಗಿಸಿದ್ದಾರೆ.  ಈ ವಿಷಯ ಸ್ಥಳೀಯ ಶಾಸಕರ ಗಮನಕ್ಕೂ ಬಂದಿದ್ದರೂ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.

ಇಲಾಖೆಯ ಕೆಲ ಅಧಿಕಾರಿ, ನೌಕರರ ಪಾಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಹಬ್ಬ ಇದ್ದಂತೆ. ಇಲಾಖೆಯಲ್ಲಿನ ಯಾವುದೇ ಕಡತಗಳನ್ನು ಅಧಿಕಾರಿ, ಸಿಬ್ಬಂದಿ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ, ಕೊರೋನ ಸೋಂಕಿನಿಂದ ಮೃತ ಪಟ್ಟಿರುವ ಶಿಕ್ಷಕರ ಕುಟುಂಬಕ್ಕೆ ಇನ್ನೂ ಪರಿಹಾರ ದೊರೆತ್ತಿಲ್ಲ ಎಂದು ದೂರಿದ ಅವರು, ಹಿಂದಿನ ಶಿಕ್ಷಣ ಇಲಾಖೆ ಅಧಿಕಾರಿಯ ಅವಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಹಣ ಪಡೆಯಲಾಗಿದೆ. ಹಣಪಡೆದವರು ನಂತರ ಕೆಲ ನೌಕರರು ಹಣವನ್ನು ಹಿಂದುರುಗಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಈ ಸಂಬಂಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಶಿಕ್ಷಣ ಇಲಾಖೆ ಭ್ರಷ್ಟಾಚಾರ ಸಂಬಂಧ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. 1 ತಿಂಗಳಲ್ಲಿ ವರದಿಯನ್ನೂ ಸಲ್ಲಿಸಬೇಕು. ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಭ್ರಷ್ಟಾಚಾರ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಶೃಂಗೇರಿ ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಇಲಾಖಾಧಿಕಾರಿಗಳು ಸುಖಾಸುಮ್ಮನೆ ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಪ್ರತಿಷ್ಠಿತ ಶಾಲೆಗಳಿಗೂ ಮಾನ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಕ್ರಮವಹಿಸಬೇಕೆಂದರು.

ಶಾಸಕರ ಆರೋಪಗಳ ಸಂಬಂಧ ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ, ಶಿಕ್ಷಕರಿಗೆ ಪರಿಹಾರ ದೊರಕದಿರುವುದು ನಿಜ. ಇದಕ್ಕೆ ಕೆಲ ಶಿಕ್ಷಕರು ಬೇರೆ ಶಾಲೆಗೆ ಸೇರಿಕೊಂಡಿರುವುದು, ಮತ್ತೆ ಕೆಲವರು ಸರಿಯಾದ ದಾಖಲಾತಿಗಳನ್ನು ನೀಡದ ಕಾರಣಕ್ಕೆ ಪರಿಹಾರ ನೀಡಲು ವಿಳಂಬವಾಗಿದೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ 15 ದಿನಗಳ ಕಾಲಾವಕಾಶವಿದ್ದು, ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನವೀಕರಣ ಮಾಡಿಕೊಡಲಾಗುವುದು ಸಮಜಾಯಿಸಿ ನೀಡಿದರು.

ಕಡೂರು ತಾಲೂಕಿನ ಎಮ್ಮೆದೊಡ್ಡಿ ಅಮೃತಮಹಲ್ ಕಾವಲ್ ಒತ್ತುವರಿಯನ್ನು ತೆರವುಗೊಳಿಸಿರುವ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಬೆಳ್ಳಿಪ್ರಕಾಶ್, ಈ ಸಂಬಂಧ ಸಭೆಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾಹಿತಿ ನೀಡಬೇಕಿದ್ದ ಅಮೃತಮಹಲ್ ಕಾವಲ್ ಉಪನಿರ್ದೇಶಕರು ಸಭೆಗೆ ಗೈರಾಗಿದ್ದು, ತಮ್ಮ ಬದಲಿಗೆ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಸಭೆಗೆ ಕಳುಹಿಸಿದ್ದರು. ಅನಾರೋಗ್ಯದ ಕಾರಣಕ್ಕೆ ಹಿರಿಯ ಅಧಿಕಾರಿ ಸಭೆಗೆ ಬಂದಿಲ್ಲ, ಅವರ ಬದಲಿಗೆ ತನ್ನನ್ನು ಕಳುಹಿಸಿದ್ದಾರೆಂದು ಸಭೆಗೆ ಬಂದಿದ್ದ ಅಧಿಕಾರಿ ತಿಳಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಪ ಸದಸ್ಯ ಆಯನೂರು ಮಂಜುನಾಥ್, ಸಭೆಗೆ ಹೇಳೋರು ಕೇಳೋರು ಯಾರು ಇಲ್ವಾ? ಅಧಿಕಾರಿಗಳ ಬದಲಿಗೆ ಯಾರೋ ಬರುತ್ತಾರೆ, ಯಾರೋ ಕುಳಿತುಕೊಳ್ಳುತ್ತಾರೆ. ಇದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಆಡಳಿತ ಯಂತ್ರ ಕುಸಿದಿರುವುದು ಕಂಡುಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಹಿರಿಯ ಅಧಿಕಾರಿಗೆ ಅನಾರೋಗ್ಯವಾಗಿದ್ದರೆ ಪತ್ರ ಬರೆದು ಬದಲಿಗೆ ಇಂತಹ ಅಧಿಕಾರಿ ಅಥವಾ ನೌಕರರು ಬರುತ್ತಾರೆಂದು ಮೊದಲೇ ತಿಳಿಸಿಬೇಕು. ಇಲ್ಲಿ ಹಾಗಾಗಿಲ್ಲ, ಶಾಸಕರು ಪ್ರಸ್ತಾಪಿಸಿದ ವಿಷಯದ ಕುರಿತು ಈ ಅಧಿಕಾರಿಗೆ ಯಾವ ಮಾಹಿತಿಯೂ ಇಲ್ಲ ಎಂದು ಅಧಿಕಾರಿಯನ್ನು ತರಾಟೆಗೈದು ಅಧಿಕಾರಿಯನ್ನು ಸಭೆಯಿಂದ ಹೊರಗೆ ಕಳುಹಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿಖಾ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಂ.ಎಚ್.ಅಕ್ಷಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News