×
Ad

​ರಾಜ್ಯದಲ್ಲಿ ಈ ಬಾರಿ ಬೇಸಿಗೆ ರಜೆಗೆ ಕತ್ತರಿ !

Update: 2022-02-13 07:31 IST

ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದ ಶಾಲೆಗಳ ಬೇಸಿಗೆ ರಜೆಯನ್ನು ಈ ಬಾರಿ 15 ದಿನಗಳ ಕಾಲ ಕಡಿತಗೊಳಿಸುವ ಸಾಧ್ಯತೆ ಇದೆ.

ಸಾಂಕ್ರಾಮಿಕದ ಕಾರಣದಿಂದ ಸುಧೀರ್ಘ ಅವಧಿಗೆ ಶಾಲೆಗಳು ಮುಚ್ಚಿದ್ದು, ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷವನ್ನು 15 ದಿನ ಮೊದಲು ಆರಂಭಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ಹೇಳಿವೆ.

"ಮಕ್ಕಳಲ್ಲಿನ ಕಲಿಕಾ ಅಂತರ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ನಷ್ಟವನ್ನು 15 ದಿನಗಳಲ್ಲಿ ಭರ್ತಿ ಮಾಡುವುದು ದೊಡ್ಡ ಸವಾಲು ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈಗ ಶಾಲೆಗಳಿಗೆ ನೀಡಿರುವ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ 29ರಂದು ಬೇಸಿಗೆ ರಜೆ ಆರಂಭವಾಗಿ ಮೇ 30ಕ್ಕೆ ಕೊನೆಗೊಳ್ಳಲಿದೆ. ಆದರೆ ಪರಿಷ್ಕೃತ ಯೋಜನೆಯ ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 15ಕ್ಕೇ ಆರಂಭವಾಗಲಿವೆ.

"ಅಧ್ಯಯನ ವರದಿಗಳ ಪ್ರಕಾರ, ಕಲಿಕಾ ನಷ್ಟ ಮತ್ತು ಕಲಿಕಾ ಅಂತರ ದೊಡ್ಡದಾಗಿದೆ. ಇವೆಲ್ಲವನ್ನೂ 15 ದಿನಗಳ ಅವಧಿಯಲ್ಲಿ ನಾವು ಗಳಿಸಿಕೊಳ್ಳಬೇಕಾಗಿದೆ" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಗಣಿತ, ಇತಿಹಾಸ ಮತ್ತು ವ್ಯಾಕರಣ ವಿಷಯಗಳಲ್ಲಿ ಆಗಿರುವ ದೊಡ್ಡ ನಷ್ಟವನ್ನು ತುಂಬಬೇಕಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಕೆಲ ವಿಷಯಗಳಲ್ಲಿ ಹಿಂದಿನ ತರಗತಿಯ ಪಾಠಗಳು ಮುಂದುವರಿಯುತ್ತವೆ. ಇವುಗಳನ್ನು ಪುನರಾವರ್ತಿಸುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಶಿಕ್ಷಕರನ್ನು ರಜೆರಹಿತ ಉದ್ಯೋಗಿಗಳು ಎಂದು ಪರಿಗಣಿಸಿ ಅದಕ್ಕೆ ಅನುಸಾರವಾಗಿ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News