ಸೌಹಾರ್ದಯುತವಾಗಿ ಶಾಲಾ ಕಾಲೇಜು ಆರಂಭಿಸಲು ಆದ್ಯತೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಫೆ.13: ಸೋಮವಾರದಿಂದ ಫ್ರೌಡಶಾಲೆಗಳನ್ನ ಆರಂಭಿಸುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು, ಡಿಡಿಪಿಐ, ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಶಾಂತಿಯುತವಾಗಿ ಪ್ರೌಢಶಾಲೆಗಳ ಎಲ್ಲಾ ತರಗತಿಗಳು ನಡೆಯುತ್ತವೆ. ಪರಿಸ್ಥಿತಿ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.
ಶಾಲಾ ಕಾಲೇಜುಗಳನ್ನು ಆರಂಭಿಸುವುದಕ್ಕೆ ನಮ್ಮ ಮೊದಲ ಆದ್ಯತೆ. ಮೊದಲಿನ ಹಾಗೇ ಸೌಹಾರ್ದಯುತವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅದೇರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವ, ಸುಳ್ಳು ಸಂದೇಶಗಳನ್ನು ಹರಿಬಿಡುವವರ ಮೇಲೆ ನಮ್ಮ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಬಜೆಟ್ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಎರಡು ವರ್ಷದಲ್ಲಿ ಆರ್ಥಿಕತೆ ಬಹಳ ನಷ್ಟ ಆಗಿದೆ. ಮುಂಬರುವ ಬಜೆಟ್ ನಲ್ಲಿ ಅದಕ್ಕೆ ಬೂಸ್ಟ್ ಕೊಡುವ ಪ್ರಯತ್ನ ಮಾಡುತ್ತೇವೆ ಎಂದರು.