×
Ad

ಮನುವಾದಿಗಳಿಂದ ಇತಿಹಾಸ ತಿರುಚುವ ಯತ್ನ: ಮಾಜಿ ಸಚಿವ ಸತೀಶ್ ಜಾರಕಿಹೊಳಿ

Update: 2022-02-13 17:50 IST

ಶಿವಮೊಗ್ಗ, ಫೆ.13: ಮನುವಾದಿಗಳಿಂದ ಆರಂಭದಿಂದಲೂ ಇತಿಹಾಸವನ್ನು ತಿರುಚುವ ಯತ್ನಗಳು ನಡೆಯುತ್ತಿವೆ. ಈಗ ಬಿಜೆಪಿ ಕೂಡ ಅದನ್ನೇ ಮುಂದುವರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ರವಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ, ನೆಹರೂ ಅವರ ಬಗ್ಗೆ ತಪ್ಪು ವಿಚಾರಗಳನ್ನು ಪಸರಿಸಲಾಗುತ್ತಿದೆ. ಮನುಸ್ಮೃತಿಯನ್ನು ಹೇರುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಆಗ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಗುರುತಿಸಿ ಜವಾಬ್ದಾರಿಗಳನ್ನು ನೀಡಲಾಗುವುದು ಎಂದರು.

ಕಾರ್ಯಕರ್ತರು, ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಶಿಸ್ತು ಬರದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪಕ್ಷದ ಕಾರ್ಯಕರ್ತರಿಗೆ ಘಟಪ್ರಭದಲ್ಲಿ ನಿರ್ಮಿಸಿರುವ ಕ್ಯಾಂಪಸ್‍ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗೆಲ್ಲುವುದಕ್ಕಿಂತ ಮಾಡಿದ ಭಾಷಣಗಳು ಈಗ ಜನರಿಗೆ ಅರ್ಥವಾಗುತ್ತಿವೆ. ಜನರೇ ಬದಲಾವಣೆಯನ್ನು ಬಯಸುತ್ತಿದ್ದಾರೆ. ಮೋದಿ ಅವರ ಸುಳ್ಳು ಮಾತುಗಳು ಈಗ ಅರ್ಥವಾಗುತ್ತಿವೆ ಎಂದು ತಿಳಿಸಿದರು.

ಮಕ್ಕಳನ್ನು ಪ್ರಚೋದಿಸುವುದು ಖಂಡನೀಯ: ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಹಿಜಾಬ್- ಕೇಸರಿ ಶಾಲು ಹೆಸರಿನಲ್ಲಿ ಮಕ್ಕಳನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಖಂಡನೀಯ ಎಂದರು.

ಬಿಜೆಪಿಗೆ ಅಧಿಕಾರ, ಹಣದ ವ್ಯಾಮೋಹ ಬಿಟ್ಟರೇ ಬೇರೆನೂ ಇಲ್ಲ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಹುಡುಕಿದರೂ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಸಿ.ಯೋಗೇಶ್, ಎಚ್.ಪಿ.ಗಿರೀಶ್, ಶ್ರೀನಿವಾಸ್, ಚಂದ್ರಭೂಪಾಲ್, ಅನಿತಾ ಕುಮಾರ್, ಪಲ್ಲವಿ, ಇಮ್ತಿಯಾಜ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News