ಈಶ್ವರಪ್ಪರನ್ನು ಸಿಎಂ ಇನ್ನೂ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ: ಡಿ.ಕೆ.ಶಿವಕುಮಾರ್ ಆಕ್ರೋಶ
ಗದಗ, ಫೆ. 13: ‘ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೆಂಪುಕೋಟೆ ಮೇಲೆ ಭಗವಾಧ್ವಜ(ಕೇಸರಿ) ಹಾರಿಸುವ ಕಾಲ ಬರುತ್ತದೆ ಎಂದಿದ್ದಾರೆ. ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಸರಕಾರದಲ್ಲಿ ಇನ್ನೂ ಇಟ್ಟುಕೊಂಡಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಿದ್ದರೆ ಹತ್ತು ನಿಮಿಷದಲ್ಲಿ ಅವರ ರಾಜೀನಾಮೆ ಪಡೆಯುತ್ತಿದ್ದೆವು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪೊಲೀಸರು ಸರಕಾರದ ಅಧಿಕಾರಿಗಳಂತೆ ಕಾರ್ಯನಿರ್ವಹಿಸುತ್ತಿಲ್ಲ, ಬದಲಿಗೆ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಯಾರೆಲ್ಲಾ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೋ ಅವರೆಲ್ಲರ ಪಟ್ಟಿ ಇಟ್ಟುಕೊಳ್ಳುತ್ತೇವೆ. ಅವರಿಗೆ ಯಾವಾಗ ಯಾವ ರೀತಿ ಉತ್ತರ ನೀಡಬೇಕೆಂಬುದು ಗೊತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ದೇಶದ ಸಂವಿಧಾನ, ರಾಷ್ಟ್ರಧ್ವಜಕ್ಕೆ ಧಕ್ಕೆಯಾಗುತ್ತಿದೆ. ಆದರೆ ನಾನು, ನಮ್ಮ ನಾಯಕ ರಾಹುಲ್ ಗಾಂಧಿ ಅವರು ಈ ರಾಷ್ಟ್ರಧ್ವಜವೇ ನಮ್ಮ ಧರ್ಮ ಎಂದು ಹೇಳುತ್ತಿದ್ದೇವೆ. ಈ ಸಂವಿಧಾನವೇ ನಮ್ಮ ಪಾಲಿಗೆ, ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ. ಈ ರಾಜ್ಯದ ಜನ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರುವ ವಿಶ್ವಾಸ ಇದೆ. ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ ಆಗಬೇಕು, ಆಗಲಿದೆ. ಈ ಕಾರಣಕ್ಕೆ ಸೋನಿಯಾ ಗಾಂಧಿ ಅವರು 12 ವರ್ಷದ ನಂತರ ಪಕ್ಷದ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ' ಎಂದು ತಿಳಿಸಿದರು.
‘ದೊಡ್ಡ ಇತಿಹಾಸವುಳ್ಳ, ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುವ ಅದೃಷ್ಟ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಸಾಧ್ಯ. ಬೇರೆಯವರಿಂದ ಇದು ಸಾಧ್ಯವಿಲ್ಲ. ಹೀಗಾಗಿ ಪಕ್ಷ ಸೇರಲು ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ. ಮನೆ ಮನೆಗೆ ಹೋಗಿ ಬೇರೆಯವರನ್ನು ಸದಸ್ಯರನ್ನಾಗಿ ಮಾಡಿ' ಎಂದು ಶಿವಕುಮಾರ್ ಕರೆ ನೀಡಿದರು.
ವಿವಾದಕ್ಕೆ ಸರಕಾರದ ಪ್ರೋತ್ಸಾಹ: ‘ಸಮವಸ್ತ್ರ ವಿವಾದಕ್ಕೆ ಸರಕಾರವೇ ಪ್ರೋತ್ಸಾಹ ನೀಡಿದೆ. ಪ್ರಾರಂಭದಲ್ಲೇ ನಿಯಂತ್ರಣ ಮಾಡಬಹುದಾಗಿತ್ತು, ಆದರೆ ಮಾಡಲಿಲ್ಲ. ಈ ರಾಜ್ಯದ ಮುಖ್ಯಮಂತ್ರಿ, ದಿಲ್ಲಿಯಲ್ಲಿ ವರ್ಷ ಕಾಲ ಹೋರಾಡಿದ ರೈತರನ್ನೇ ಕೃಪಾಪೋಷಿತ ನಾಟಕ ಮಂಡಳಿಯವರು ಎಂದು ಕರೆದಿದ್ದರು. ಅವರನ್ನು ಭಯೋತ್ಪಾದಕರು ಎಂದಿದ್ದರು' ಎಂದು ಅವರು ದೂರಿದರು.
‘ಶಾಲಾ-ಕಾಲೇಜು ಬಂದ್ ಮಾಡಲು ನಾನೇ ಮನವಿ ಮಾಡಿದ್ದೆ. ಈ ರಾಜ್ಯ ದೇಶಕ್ಕೆ ದೊಡ್ಡ ಶಿಕ್ಷಣ ಕೇಂದ್ರ. ನಮ್ಮಲ್ಲಿರುವ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹಾಗೂ ಇತರೆ ವೃತ್ತಿಪರ ಶಿಕ್ಷಣ ಕಾಲೇಜು ಇದ್ದು, ಇಲ್ಲಿ ವ್ಯಾಸಂಗ ಮಾಡಿ ವಿಶ್ವದ ಬೇರೆ ರಾಷ್ಟ್ರಗಳಲ್ಲಿ ಪ್ರತಿಷ್ಟಿತ ಹುದ್ದೆ ಅಲಂಕರಿಸಿದ್ದಾರೆ. ದೇಶಕ್ಕೆ ಹೆಚ್ಚು ತೆರಿಗೆ ಕಟ್ಟುವ, ಹೆಚ್ಚು ಮಾನವ ಸಂಪನ್ಮೂಲ ನೀಡುವ ರಾಜ್ಯ ಕರ್ನಾಟಕ. ಇದಕ್ಕೆ ಕಳಂಕ ಬರುವಂತೆ ಮಾಡಿದ್ದು ಯಾರು? ನಾವು ರಾಜ್ಯದ ಪ್ರತಿಷ್ಟೆ ಉಳಿಸಬೇಕು' ಎಂದು ಅವರು ಮನವಿ ಮಾಡಿದರು.
‘ನಮ್ಮಲ್ಲಿರುವ ಐಟಿ-ಬಿಟಿ, ಮೆಡಿಕಲ್ ಟೂರಿಸಂ, ಸೋಲಾರ್ ಪಾರ್ಕ್, ಸಂಸ್ಕೃತಿ, ಶಿಕ್ಷಣ ಬೇರೆ ರಾಜ್ಯದಲ್ಲಿ ಇವೆಯೇ? ಇದರ ಮಧ್ಯೆ ಈ ಘಟನೆ ಕಪ್ಪು ಚುಕ್ಕೆಯಾಗಿದೆ. ಕೇಸರಿ ಶಾಲು ವಿವಾದದಲ್ಲಿ ನಮ್ಮ ನಿಲುವು, ಸಂವಿಧಾನಕ್ಕೆ ಬದ್ಧವಾಗಿರುವುದು. ನಾವು ಮೊದಲಿನಿಂದಲೂ ಅಲ್ಪಸಂಖ್ಯಾತರ ರಕ್ಷಣೆ ಮಾಡಿಕೊಂಡು ಬಂದಿದ್ದು, ಮುಂದೆಯೂ ಮಾಡುತ್ತೇವೆ' ಎಂದು ಅವರು ತಿಳಿಸಿದರು.
‘ಎಬಿವಿಪಿ ಜತೆಯಲ್ಲಿ ಪ್ರತಿಭಟನೆ ಮಾಡಿದ ಐದಾರು ಹುಡುಗಿಯರು, ಸಿಎಫ್‍ಐ ಜತೆಯೂ ಪ್ರತಿಭಟನೆ ಮಾಡಿದ್ದಾರೆ. ಇವರು ಯಾರ ಸಂಪರ್ಕದಲ್ಲಿದ್ದಾರೆ, ಎಬಿವಿಪಿಯಲ್ಲಿ ಇದ್ದವರು ಈಗ ಇವರ ಜತೆ ಹೇಗೆ ಇದ್ದಾರೆ? ಎಬಿವಿಪಿ ಎಂದರೆ ಬಿಜೆಪಿಯಲ್ಲವೇ? ಸುಪ್ರೀಂ ಕೋರ್ಟ್ ತೀರ್ಪು, ಬಾಬ್ರಿ ಮಸೀದಿ ಬಗ್ಗೆ ಟ್ವೀಟ್ ಮಾಡಿರುವವರನ್ನು ಸರಕಾರ ನೋಡಿಕೊಳ್ಳಬೇಕು. ನಾವು ಆ ಬಗ್ಗೆ ಮಾತನಾಡುವುದಿಲ್ಲ. ನಾಲ್ಕು ವಿದ್ಯಾರ್ಥಿಗಳು ಯಾರೋ ಅದರ ಬಗ್ಗೆ ಮಾತನಾಡಿದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಅಧಿಕಾರದಲ್ಲಿ ಇದ್ದಿದ್ದರೆ ಮಾತನಾಡುತ್ತಿದ್ದೆ' ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.