ಬಿಜೆಪಿಗೆ ವಲಸೆ ಹೋದ ಶಾಸಕರು ಕಾಂಗ್ರೆಸ್ ಗೆ ಬಂದೇ ಬರ್ತಾರೆ: ಸತೀಶ್ ಜಾರಕಿಹೊಳಿ

Update: 2022-02-13 14:09 GMT

ದಾವಣಗೆರೆ: ಕಾಂಗ್ರೆಸ್‍ನಿಂದ ಬಿಜೆಪಿಗೆ ವಲಸೆ ಹೋದ ಶಾಸಕರು ಮತ್ತೆ ಕಾಂಗ್ರೆಸ್ ಗೆ ಬಂದೇ ಬರ್ತಾರೆ. ಈ ಕುರಿತಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೋದ ಕಾಂಗ್ರೆಸ್ ಶಾಸಕರು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎಂದು ಬಹಿರಂಗ ಪಡಿಸಿದರು. 

ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲಾ ಸಹಜ. ರಾಜಕೀಯದಲ್ಲಿ ಹಲವಾರು ವೇಳೆ ಹಲವಾರು ಬದಲಾವಣೆ ಆಗಿರುವುದನ್ನು ಕಾಣಬಹುದು ಎಂದು ಹೇಳಿದರು. 

ಎಂಎಲ್‍ಸಿ ಸಿಎಂ ಇಬ್ರಾಹಿಂ ಜೊತೆ ಪಕ್ಷದ ವರಿಷ್ಠರು ಮಾತುಕತೆ ನಡೆಸುತಿದ್ದಾರೆ. ಅವರು ನಮ್ಮ ಜೊತೆಯೇ ಇರುತ್ತಾರೆ ಅನ್ನೋ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರೇ ಇಬ್ರಾಹಿಂ ಜೊತೆ ಮಾತನಾಡುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. 

ಹಿಜಾಬ್ ವಿಚಾರ ಉಡುಪಿಯಿಂದ ಆರಂಭ ಆಗಿದೆ. ಅದನ್ನ ಮಾಡಿದವರು ಕೆಲವೇ ಕೆಲವು ಸಂಘಟನೆಯವರು. ಈ ವಿವಾದ ಬೇಗ ಮುಗಿಲಿ ಅನ್ನೋದು ನಮ್ಮ ಆಸೆ. ನಮ್ಮ ದೇಶ ವಿವಿಧ ಸಮಾಜದ ಪ್ರಾಮುಖ್ಯತೆ ದೇಶ. ಕಾರಣ ಹಿಜಾಬ್-ಕೇಸರಿ ವಿಚಾರವಾಗಿ ಸರ್ಕಾರ-ನ್ಯಾಯಾಲಯ ಒಂದು ತೀರ್ಮಾನಕ್ಕೆ ಬರಬೇಕು. ಎರಡು ಕಡೆ ಸರಿಯಾದ ನ್ಯಾಯ ಸಿಗುವಂತೆ ಆಗಬೇಕು ಎಂದು ಹೇಳಿದ್ದಾರೆ.  

ಸಿದ್ದರಾಮಯ್ಯ ಕಾಂಗ್ರೆಸ್ ನಂಬರ್ ಒನ್ ನಾಯಕ

ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಅಶಕ್ತರಾಗಿದ್ದಾರೆ ಅನ್ನೋ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳೆ ಅವರು,  ಸಿದ್ದರಾಮಯ್ಯ ಯಾವಾಗಲೂ ಅತ್ಯುನ್ನತ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಅವರದೇ ಆದ ಬೆಂಬಲಿಗರ ಪಡೆಯಿದೆ. ಅವರಿಗೆ ರಾಜ್ಯದಲ್ಲಿ ಮಾಸ್ ಅಟ್ಯ್ರಾಕ್ಷನ್ ಇದೆ. ಅವರು ಯಾವಾಗಲೂ ನಂಬರ್ ಒನ್. ಸದಾ ಅವರು ನಂಬರ್ ಒನ್ ಆಗಿಯೇ ಇರುತ್ತಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News