'ಸಿದ್ದರಾಮಯ್ಯ ನಿಜವಾದ ಚೌಕೀದಾರ': ಪ್ರತಾಪ್ ಸಿಂಹಗೆ ಮಾಜಿ ಸಚಿವ ಡಾ.ಮಹದೇವಪ್ಪ ತಿರುಗೇಟು

Update: 2022-02-13 15:52 GMT

ಬೆಂಗಳೂರು, ಫೆ. 13: ‘ತಮ್ಮ ಸಾರ್ವಜನಿಕ ಜೀವನದಲ್ಲಿ ಹಣಕಾಸು ಸಚಿವರಾಗಿ 13 ಬಾರಿ ಬಜೆಟ್ ಮಂಡಿಸಿ ನೂರಾರು ಜನಪರ ಯೋಜನೆಗಳನ್ನು ನೀಡಿ ಸಾರ್ವಜನಿಕರ ತೆರಿಗೆ ಹಣವನ್ನು ಕಾಪಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಸಿದ್ದರಾಮಯ್ಯನವರು ದೇಶಕಂಡ ನಿಜವಾದ ಚೌಕೀದಾರ' ಎಂದು  ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಾಮಗಾರಿ ಗುತ್ತಿಗೆಯಲ್ಲಿ ಶೇ.40ರಷ್ಟು ಕಮೀಷನ್ ಪಡೆಯುತ್ತಾ ರಾಜ್ಯವನ್ನು ಲೂಟಿ ಮಾಡುತ್ತಿರುವ ನಿಮ್ಮ ಬಿಜೆಪಿ ಸರಕಾರಕ್ಕಾಗಲೀ ನಿಮಗಾಗಲೀ ಈ ಸಂಗತಿಯು ಏಳೇಳು ಜನ್ಮಕ್ಕೂ ಅರ್ಥವಾಗುವುದಿಲ್ಲ. ಕಾಂಗ್ರೆಸ್ ಸರಕಾರದ ಅಧಿಕಾರದ ಅವಧಿಯಲ್ಲಿ ಜನರ ಅನುಕೂಲಕ್ಕೆ ರೂಪಿಸಲಾದ 164ಕ್ಕೂ ಹೆಚ್ಚಿನ ಯೋಜನೆಗಳು ಸಿದ್ದರಾಮಯ್ಯ ಅವರೊಳಗಿನ ಸಮರ್ಥ ಅರ್ಥವ್ಯವಸ್ಥೆಯ ತಿಳುವಳಿಕೆಗೆ ರೂಪಕ ಎನ್ನಬಹುದು' ಎಂದು ತಿಳಿಸಿದ್ದಾರೆ.

 ಇದನ್ನೂ ಓದಿ: ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ 

‘ಸಂಸದರೇ, ನಿಮ್ಮ ಡಬಲ್ ಇಂಜಿನ್ ಸರಕಾರದ ಅವಧಿಯಲ್ಲಿ ಯಾವ ಜನಪರ ಯೋಜನೆಗಳನ್ನಂತೂ ರೂಪಿಸದ್ದನ್ನು ನಾವು ಕಂಡಿಲ್ಲ. ಕೋಮುವಾದ ಹಬ್ಬಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದೊಂದೇ ನೀವು ಮಾಡಿದ ಕೆಲಸ. ಹಾಗಿದ್ದರೆ ಕೇವಲ ಕೋಮುವಾದ ಹಬ್ಬಿಸಿದ್ದಕ್ಕೆ ರಾಜ್ಯದ ಸಾಲ ಇಷ್ಟೊಂದು ಹೆಚ್ಚಾಯಿತೇ?' ಎಂದು ಮಹದೇವಪ್ಪ, ಸಂಸದ ಪ್ರತಾಪಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸದಾ ಟಿಪ್ಪುವಿನ ಧ್ಯಾನ ಮಾಡುತ್ತಾ ಕೂರುವ ನೀವು ಕರ್ನಾಟಕಕ್ಕೆ ಕೊಡಬೇಕಾದ ಜಿಎಸ್ಟಿ ತೆರಿಗೆ ಪಾಲನ್ನು ಕೇಳಿ ತರುವ ಧೈರ್ಯವನ್ನು ಎಂದಾದರೂ ತೋರಿದ್ದೀರಾ? ಎಂದಾದರೂ ಬೆಲೆ ಏರಿಕೆ ಬಗ್ಗೆ ಸಂಸತ್ ನಲ್ಲಿ ಪ್ರಸ್ತಾಪಿಸಿದ್ದೀರಾ?, ಭಾರತದ ಅರ್ಥ ವ್ಯವಸ್ಥೆ ಕುಸಿದು, ಜನ ಜೀವನ ಮೂಲೆ ಸೇರುವಂತಾಗಿದೆ. ಈ ಬಗ್ಗೆ ನಿಮ್ಮ ಅರ್ಥ ಸಚಿವೆಯನ್ನು ಪ್ರಶ್ನಿಸುವ ಧೈರ್ಯ ತೋರಿದ್ದೀರಾ?' ಎಂದು ಮಹದೇವಪ್ಪ ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News