ಗೋಮೂತ್ರದಿಂದ ಸುವಾಸವೆ ಬೀರುವ ಉತ್ಪನ್ನಗಳ ಉತ್ಪಾದನೆ: ಸಚಿವ ಪ್ರಭು ಚೌಹಾಣ್

Update: 2022-02-13 16:33 GMT

ಬೆಂಗಳೂರು: ನಿರುದ್ಯೋಗ ಹೋಗಲಾಡಿಸುವ ಹಿತದೃಷ್ಟಿಯಿಂದ ಜಿಲ್ಲಾ ಸರ್ಕಾರಿ ಗೋಶಾಲೆಗಳಲ್ಲಿ ಗವ್ಯ ಉತ್ಪನ್ನಗಳನ್ನು ಉತ್ಪಾದಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ ರಾಜಾನುಕುಂಟೆ ಸಮೀಪದ ಬೂಧಮಾನಹಳ್ಳಿ ಕಾಕೋಳದಲ್ಲಿರುವ ನಾಟಿ ಹಸು ಗೋಶಾಲಾಗೆ ಭೇಟಿ ನೀಡಿ, ಗೋಮಾತೆಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದ ನಂತರದಲ್ಲಿ  ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿರುವ ಜಿಲ್ಲೆಗೊಂದು ಸರ್ಕಾರಿ ಗೋಶಾಲೆಗಳಲ್ಲಿ‌ ಗೋಮಾತೆಯ ಸಂರಕ್ಷಣೆ, ಸಾಕಾಣಿಕೆ, ಪೋಷಣೆ ಜತೆಗೆ ಅಸಹಾಯಕರು ಮತ್ತು ಅಂಗವಿಕಲರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ  ಗವ್ಯ ಉತ್ಪನ್ನಗನ್ನು ಉತ್ಪಾದನೆ ಮಾಡಿ, ಗೋಶಾಲೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಖಾಸಗಿ ಗೋಶಾಲೆಗಳಲ್ಲಿ ಗೋವುಗಳನ್ನು ಸಾಕಾಣಿಕೆ ಮಾಡಿ,‌ ಹಾಲು, ಬೆಣ್ಣೆ, ತುಪ್ಪ, ಗೊಬ್ಬರ, ರಾಸಾಯನಿಕ ಗೊಬ್ಬರ, ಗೊಬ್ಬರ ಗ್ಯಾಸ್, ಗೋಮೂತ್ರದಿಂದ ಸುವಾಸನೆ ಬೀರಿತ ಉತ್ಪನ್ನಗಳು, ಗವ್ಯ ಉತ್ಪನ್ನಗಳಾದ‌ ಪಂಚ ಗವ್ಯ, ಅಗ್ನಿ ಗವ್ಯ ಸೇರಿದಂತೆ ಹತ್ತಾರು ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುತ್ತಾ, ಅಸಹಾಯಕರ ಬದುಕಿಗೆ ನೆರಳಾಗಿದ್ದಾರೆ ಎಂದು ಪ್ರಭು ಚವ್ಹಾಣ್ ಪ್ರಶಂಸೆ ವ್ಯಕ್ತಪಡಿಸಿದರು.

ನಾನು ಪಶು ಸಂಗೋಪನಾ ಸಚಿವನಾದ ನಂತರದಲ್ಲಿ ರಾಜ್ಯದ ಹಲವು ಖಾಸಗಿ ಗೋಶಾಲೆಗಳು ಹಾಗೂ ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿರುವ ಪ್ರಸಿದ್ಧ ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಗೋವುಗಳ ಸಾಕಾಣಿಕೆ ಮತ್ತು ಗವ್ಯ ಉತ್ಪನ್ನಗಳ ಉತ್ಪಾದನೆ ಕುರಿತು ಅಧ್ಯಯನ ನಡೆಸಿದ್ದೇನೆ ಎಂದರು.

ಗೋಹತ್ಯೆ ಕಾಯ್ದೆ ಜಾರಿಯಾದ ನಂತರದಲ್ಲಿ 10 ಸಾವಿರ ಗೋವುಗಳನ್ನು ರಕ್ಷಿಸಿ, ಗೋಶಾಲೆಗಳಿಗೆ ಕಳುಹಿಸಲಾಗಿದೆ. 500ಕ್ಕೂ ಅಧಿಕ ಎಫ್.ಐ.ಆರ್ ದಾಖಲಿಸಿ, ಗೋಮಾತೆ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮುಂದಿನ ದಿನಗಳಲ್ಲಿ ಗೋಮಾತೆ ಸಂರಕ್ಷಣೆಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಪ್ರಭು ಚವ್ಹಾಣ್ ಅವರು ಮಾಹಿತಿ ನೀಡಿದರು.

ನಾಟಿ ಹಸು ಗೋಶಾಲೆಯ ಸಂಸ್ಥಾಪಕ ಸುಧೀಂದ್ರ, ಗೋಪಾಲಕ ಕೃಷ್ಣಮೂರ್ತಿ ಸಚಿವರಿಗೆ ಇದೇ ಸಂದರ್ಭದಲ್ಲಿ ಗೋವುಗಳ ಪ್ರಾತ್ಯಕ್ಷಿಕೆ ನೀಡಿದರು.

ನಾಟಿ ಹಸು ಗೋಶಾಲೆಯಲ್ಲಿ ಗಿರ್, ಕಾಂಕ್ರೇಜ್, ಬಗೂರು, ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡು ಗಿಡ್ಡ, ಸಿಂಧಿ, ಕಬಲ್, ಅಮರಾವತಿ, ವೆಚ್ಚೂರ, ಪುಂಗನೂರು, ಮನಪಾರೈ ಸೇರಿದಂತೆ 400ಕ್ಕೂ ಅಧಿಕ ಗೋವುಗಳನ್ನು ಸಾಕಾಣಿಕೆ ಮಾಡಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖಾ ಅಧಿಕಾರಿಗಳು, ಪಶು ವೈದ್ಯರುಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News