ಮಂಡ್ಯ: ಜೂನ್‍ನಲ್ಲಿ ಮೈಷುಗರ್ ಆರಂಭಿಸದಿದ್ದರೆ ತೀವ್ರ ಹೋರಾಟ; ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಿರ್ಣಯ

Update: 2022-02-13 17:31 GMT

ಮಂಡ್ಯ, ಫೆ.13: ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಿ ಮೈಷುಗರ್  ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲಿದ್ದರೆ ಮತ್ತೆ ತೀವ್ರ ಹೋರಾಟ ನಡೆಸಲು ರವಿವಾರ ನಡೆದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಿರ್ಣಯ ಕೈಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ಪ್ರಸಕ್ತ ಸಾಲಿನಿಂದಲೇ ಆರಂಭಿವುಸುವುದಾಗಿ ಭರವಸೆ ನೀಡಿ ಮೂರು ತಿಂಗಳಾದರೂ ಇದುವರೆಗೆ ಕಾರ್ಖಾನೆ ಆರಂಭದ ಕಾರ್ಯಚಟುವಟಿಕೆಗಳೇ ಪ್ರಾರಂಭವಾಗಿಲ್ಲವೆಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ 40 ವರ್ಷ ಗುತ್ತಿಗೆ ನೀಡುವ ಸಚಿವ ಸಂಪುಟದ ತೀರ್ಮಾನ ರದ್ದುಪಡಿಸಿ, ಬಜೆಟ್‍ನಲ್ಲಿ ಅನುದಾನ ನಿಗದಿಗೊಳಿಸಿ ಕಾರ್ಖಾನೆ ಆರಂಭಿಸುವ ಬಗ್ಗೆ ಆದೇಶವಾಗಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖ್ಯಮಂತ್ರಿಗಳ ಸಭೆ ತೀರ್ಮಾನದಂತೆ  ಇನ್ನೂ ತಜ್ಞರ ಸಮಿತಿ ನೇಮಕವಾಗಿಲ್ಲ. ತಜ್ಞರ ಸಮಿತಿ ವರದಿ ಇಲ್ಲದ ಕಾರಣ ಅನುದಾನ ಬಿಡುಗಡೆತೆ ತೊಡಕಾಗಬಹುದು ಎಂದು ವಿವರಿಸಿದರು.
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ ಅವರು, ಕಾರ್ಖಾನೆ ಆರಂಭದ ಜತೆಗೆ ಕೋ -ಜನರೇಷನ್, ಎಥನಾಲ್ ಮತ್ತು ಡಿಸ್ಟಲರಿ ಘಟಕಗಳನ್ನೂ ಆರಂಭಿಸಬೇಕೆಂದು ಒತ್ತಾಯಿಸಿದರು.

ಕಾರ್ಖಾನೆ ಆರಂಭದ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದು, 210 ಕೋಟಿ ರೂ. ಅನುದಾನ ಬಿಡುಗಡೆಗೆ ತೀರ್ಮಾನಿಸಿದ್ದಾರೆ. ಈ ಸಂಬಂಧ ಮತ್ತೊಂದು ಸಭೆ ನಿಗದಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಕ್ಕರೆ ಸಚಿವರು ಕೆ.ಟಿ.ಶ್ರೀಕಂಠೇಗೌಡರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದ ವೇಳೆ ಭರವಸೆ ನೀಡಿದರು.

40 ವರ್ಷಗಳ ಗುತ್ತಿಗೆ ನೀಡುವ ತೀರ್ಮಾನ ರದ್ದುಪಡಿಸಿ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕಾರ್ಖಾನೆ ಆರಂಭವಾಗುವ ಚಟುವಟಿಕೆಗಳು ಗೋಚರವಾಗುತ್ತಿಲ್ಲ. ಹಾಗಾಗಿ ಚರ್ಚಿಸಲು ಸಭೆ ಕರೆಯಲಾಗಿತ್ತು ಎಂದು ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿ ಸುನಂದಾ ಜಯರಾಂ ತಿಳಿಸಿದರು.

ರೈತಸಂಘದ ಮುಖಂಡರಾದ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಚಿಂತಕ ಪ್ರೊ.ಹುಲ್ಕೆರೆ ಮಹಾದೇವ, ಕರ್ನಾಟಕ ಪ್ರಾಂತ ರೈತಸಂಘದ ಟಿ.ಯಶವಂತ್, ಎನ್.ಎಲ್.ಭರತ್‍ರಾಜ್, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ, ಸಿಐಟಿಯುನ ಸಿ.ಕುಮಾರಿ, ಕನ್ನಡ ಸೇನೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

“ಕಾರ್ಖಾನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಂಡಿದ್ದು, ವಾರದೊಳಗೆ ಮತ್ತೊಂದು ಸಭೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಮತ್ತು ಸಕ್ಕರೆ ಸಚಿವರು ಭರವಸೆ ನೀಡಿದ್ದಾರೆ. ಈ ಸಭೆಯ ತೀರ್ಮಾನ ವಿವರಿಸುವ ಜವಾಬ್ಧಾರಿಯನ್ನು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರಿಗೆ ವಹಿಸಲಾಗಿದೆ. ಜೂನ್‍ನಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ.”
-ಸುನಂದಾ ಜಯರಾಂ, ರೈತ ನಾಯಕಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News