ಸರ್ವನಾಶದ ತಾತ್ವಿಕತೆಯ ಕೇಡಿಗತನದ ದುರಂತ

Update: 2022-02-14 04:32 GMT

Brutus:….And therefore think him as a serpent's egg,

Which, hatch'd, would as his kind grow mischievous,

And kill him in the shell

 ಹಿಜಾಬಿನಲ್ಲೂ ನಡೆದಿರುವುದೂ ಇದೇ ಸಂಗತಿ. ಈ ಕಿಸುರು, ಮಾತ್ಸರ್ಯ, ದ್ವೇಷವನ್ನೇ ಬಹುಸಂಖ್ಯಾತ ಸಮುದಾಯದ ಕಣ್ಣೋಟವಾಗಿ ಬಿಂಬಿಸಿ, ಅಧಿಕಾರ ಹಿಡಿವ ತಾತ್ವಿಕತೆ ಅತ್ಯಂತ ಕರಾಳವಾದದ್ದು. ರಾಜಶಾಹಿಯಲ್ಲೂ ಇಂತಹ ತಾತ್ವಿಕ ಸಮೀಕರಣ ನಡೆದಿರಲಿಲ್ಲ. ಒಮ್ಮೆ ಈ ಸಮುದಾಯವನ್ನೇ ಅಪರಾಧೀಕರಣದ ಇಮೇಜ್ ಒಳಗೆ ಬಂಧಿಸಿಟ್ಟರೆ ಅದರಿಂದ ಹೊರಬರಲು ಶತಮಾನವೇ ಬೇಕೇನೋ. ಪ್ರಜಾಸತ್ತೆಯ ಮೂಲ ಮೌಲ್ಯಗಳಾದ, ಸ್ವಾತಂತ್ರ, ಸಮಾನತೆ, ಭ್ರಾತೃತ್ವಗಳನ್ನೂ ಸಮಾಧಿ ಮಾಡದೇ ಈ ಅಂಚಿಗೆ ಸರಿಸುವ ಪ್ರಯತ್ನ ಸಾಧ್ಯವಿಲ್ಲ. ಈ ದುರಂತವನ್ನು ತಡೆಯಲು ಇರುವ ಏಕಮಾತ್ರಾ ರಕ್ಷಕ ತಾಯಿತ ನಮ್ಮ ಸಂವಿಧಾನ. ಅದನ್ನು ಹರಿದುಮುಕ್ಕಿದರೆ, ಈ ಅಪರಾಧೀಕರಣ ಮತ್ತು ಕಿಸುರಿನ ಮುಂದಿನ ಬಲಿ ದಲಿತರು, ಬಳಿಕ ಹಿಂದುಳಿದ ಸಮುದಾಯಗಳು. ‘‘ಅವನನ್ನು ಹಾವಿನ ಮೊಟ್ಟೆಯಂತೆ ಭಾವಿಸಿ. ಹಾವು ಮೊಟ್ಟೆಯೊಡೆದು ಹೊರಬಂದರೆ, ಉಳಿದ ಹಾವುಗಳಂತೆ ಅಪಾಯಕಾರಿಯಾಗುತ್ತೆ. ಅದಕ್ಕೇ ಮೊಟ್ಟೆಯೊಳಗಿದ್ದಾಗಲೇ ಸಾಯಿಸಿ’’

 (ಶೇಕ್ಸ್‌ಪಿಯರ್ ನ ಜೂಲಿಯಸ್ ಸೀಸರ್ ನಾಟಕ. ಅಂಕ 2, ದೃಶ್ಯ1)

   ದಶಕಗಳ ಹಿಂದೆ ನಾನು ಉಪನ್ಯಾಸಕನಾಗಿದ್ದಾಗ ಯಾರೋ ಪುಣ್ಯಾತ್ಮರ ಔಟ್ ಹೌಸಿನಲ್ಲಿ ಬಾಡಿಗೆಗೆ ಇದ್ದೆ. ಆ ಮನೆಯ ಹುಡುಗ ಒಂದು ದಿನ ತನಗಿಂತ ಜಾಸ್ತಿ ಅಂಕ ಪಡೆದ ಸಹಪಾಠಿ ಬಗ್ಗೆ, ಅವನ ಜಾತಿ, ದಿರಿಸು, ಉಣ್ಣುವ ರೀತಿ ಬಗ್ಗೆ ತಾತ್ಸಾರದಲ್ಲಿ ಹೇಳುತ್ತಿದ್ದ. ಅವನ ತಾಯಿ ಕಿವಿ ಅಗಲ ಮಾಡಿ ಕೇಳಿಸಿಕೊಳ್ಳುತ್ತಿದ್ದಳು. ಆ ಕಾರಣಕ್ಕೇ ಅವನ ಹರಿಕಥೆಗೆ ಹುರುಪು ಬಂದಿತ್ತು.ಅವನ ಅಜ್ಜಿ ಒಳಕೋಣೆಯಲ್ಲಿದ್ದವಳು. ‘‘ನಿನ್ ಕಿಸುರು ಜಾಸ್ತಿ, ನಿಂದೇನು ಅಂತ ಮೊದಲು ನೋಡ್ಕೋ!’’ ಅಂತ ಗದರಿ, ‘‘ಅವನು ಹೆಂಗಾರಿರ್ಲಿ, ನಿಂಗೆ ಓದಿ ಮಾರ್ಕ್ಸು ತಗೊಳೋಕೇನು? ಅವನೇನು ನಿನ್ ಕಣ್ಣಿಗೆ ಬಟ್ಟೆ ಕಟ್ಟಿದಾನಾ?’’ ಅಂತ ರೇಗಿದರು.

  ಆ ಅಜ್ಜಿಯ ಮಾತು ಬಿಟ್ಟೂ ಬಿಟ್ಟೂ ಕಾಡುತ್ತಲೇ ಇದೆ.

     ಮೊದಲು ಕೀಳರಿಮೆಯ ಕಣ್ಣು ಕಿಸುರಾಗಿ ಅದು ಮತ್ಸರವಾಗಿ; ಮತ್ಸರ ನಿಧಾನಕ್ಕೆ ಸೇಡಿನ ಕಿಚ್ಚಾಗಿ ಪರಿವರ್ತನೆ ಆಗುವುದು ನಾವು ಕಂಡಿದ್ದೇವೆ. ಪಕ್ಕದವನ ತೋಟದ ಹಸಿರುಕ್ಕುವ ಗಿಡ ಕಡಿದು ಹಾಕುವುದು, ಹಸುವಿಗೆ ಹೊಡೆಯುವುದು, ಬಣವೆಗೆ ಬೆಂಕಿ ಹಚ್ಚುವುದು ? ಇವೆಲ್ಲಾ ಹಳ್ಳಿಗಳ ಮಾತ್ಸರ್ಯದ ದ್ಯೋತಕವಾಗಿ ನಡೆದಿದೆ. ದಲಿತನೊಬ್ಬ ಮದುವೆ ದಿಬ್ಬಣಕ್ಕೆ ಕುದುರೆ ಏರಿದರೇ ಮೇಲ್ಜಾತಿಯವರ ಕಣ್ಣು ಕಿಸುರಾಗಿ ಹಿಂಸೆ ಮಾಡಿದ್ದು ನಡೆದಿದೆ.

   ಇವೆಲ್ಲಾ ಸ್ಥಳೀಯವಾಗಿ ವ್ಯಕ್ತಿಗತ ಮಟ್ಟದಲ್ಲಿ ಶತಮಾನಗಳಿಂದ ನಡೆದಿದೆ. ಆದರೆ ಇದಕ್ಕೊಂದು ಸಂಘಟಿತ ತಾತ್ವಿಕ ಪ್ರಣಾಳಿಕೆಯನ್ನು ಯಾವ ನಾಗರಿಕತೆಯೂ ಕಟ್ಟಿರಲಿಲ್ಲ. ಅದು ಪರಮ ಕೇಡಿಗತನದ ಕೆಲಸ ಎಂದೇ ಎಲ್ಲಾ ನಾಗರಿಕತೆಗಳೂ ಭಾವಿಸಿದ್ದವು. ಮಹಾಭಾರತದ ಕೊನೆಗೆ ತಾನೇ ಹುಟ್ಟಿಸಿದ ಕುಡಿಗಳು ಕಿತ್ತಾಡಿ ಸರ್ವ ನಾಶವಾದಾಗ ಹತಾಶರಾದ ವ್ಯಾಸರು ಕೊನೆಗೆ ಹೇಳುವ ಮಾತೊಂದು ಸುಪ್ರಸಿದ್ಧ.

  ‘‘ಎರಡೂ ಕೈಯೆತ್ತಿ ಹೇಳುತ್ತಿದ್ದೇನೆ. ದಯವಿಟ್ಟು ಕೇಳಿಸಿಕೊಳ್ಳಿ, ಎಲ್ಲಾ ವಿವೇಕದ ಮಾತುಗಳನ್ನು ಸಂಗ್ರಹರೂಪದಲ್ಲಿ ಹೇಳುವೆ, ಪರೋಪಕಾರವೇ ಪುಣ್ಯ; ಪರಪೀಡನೆಯೇ ಪಾಪ’’ ಎಂದು ಉದ್ಗರಿಸುತ್ತಾರೆ.

  ‘‘ನಿಜ ವೈಷ್ಣವ ಯಾರು? ಪರಪೀಡನೆ ಮಾಡದವನು’’ ಎಂದು ನರಸಿಂಹ ಮೆಹ್ತಾ ಎಂಬ ಹರಿದಾಸ ಹೇಳಿದ್ದೇ ಗಾಂಧಿಯ ಪರಮ ಪ್ರೀತಿಯ ಹಾಡಾಯಿತು.

    ಇಂತಹ ಕಿಸುರು, ಮತ್ಸರ, ದ್ವೇಷವನ್ನು ನಾಡಿನ ಬಹುಸಂಖ್ಯಾತರ ಸಿದ್ಧಾಂತವಾಗಿ ರೂಪಿಸಿದವರು ಇಬ್ಬರೇ. ಹಿಟ್ಲರ್ ಮತ್ತು ಸಾವರ್ಕರ್. ಹಿಟ್ಲರ್ ಮಾಡಿದ ಅನಾಹುತ ಇಡೀ ಜಗತ್ತನ್ನು ಹೇಗೆ ನಡುಗಿಸಿತು ಎಂದು ನಾವು ಬಲ್ಲೆವು. ಯೆಹೂದಿಗಳು ಕಾಸು ಮಾಡುವುದರಲ್ಲಿ ನಿಪುಣರು ಎಂಬ ಕಿಸುರು, ಇಡೀ ಜರ್ಮನಿಯನ್ನು ಆವರಿಸುವಂತೆ ಹಿಟ್ಲರ್ ಮಾಡಿದ್ದ. ಅಷ್ಟೇ ವ್ಯವಹಾರ ನೈಪುಣ್ಯದ ಮೂಲಕ ಸ್ಪರ್ಧಾತ್ಮಕವಾಗಿ ನಾವೂ ಗೆಲ್ಲೋಣ ಎಂಬ ಧೈರ್ಯವನ್ನು ಆತ ಯೆಹೂದಿಗಳಲ್ಲದ ಕ್ರಿಶ್ಚಿಯನ್ ಜರ್ಮನರಲ್ಲಿ ತುಂಬಲಿಲ್ಲ. ಅದರ ಬದಲು, ಅವರನ್ನು ಸಾಯಿಸೋಣ, ಆಗ ನಾವು ನಮ್ಮದೇ ವ್ಯವಹಾರ ಕಟ್ಟಬಹುದು ಎಂಬ ಮತ್ಸರವೇ ಗುಮ್ಮಿ ಕೊಟ್ಟ ಅಂಜುಕುಳಿತನ ಜರ್ಮನಿಯ ಮಂತ್ರವಾಯಿತು.

  ಹಿಟ್ಲರ್ ಅಷ್ಟಕ್ಕೆ ನಿಲ್ಲದೇ ತೋಳ ಕುರಿಮರಿಯ ಕತೆಯನ್ನು ಅಕ್ಷರಶಃ ಪ್ರಚಾರ ಮಾಡಿದ್ದ. ನಮ್ಮ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದವರು ಇವರು ಎಂದು ಚರಿತ್ರೆಯನ್ನು ಕೆದಕಿ ಪೂರಂಪೂರಾ ಜರ್ಮನರನ್ನು ಸಮೂಹ ಸನ್ನಿಯಲ್ಲಿ ಕೆಡವಿದ. ನಮ್ಮಲ್ಲಿ ಇದನ್ನು ವ್ಯವಸ್ಥಿತವಾದ ಹುಸಿ ತರ್ಕದ ಮೇಲೆ ಭಾವೋದ್ರೇಕದ ಪರಿಭಾಷೆಯಲ್ಲಿ ಸಾವರ್ಕರ್ ಕಟ್ಟಿದರು, ಆರೆಸ್ಸೆಸ್ ಅದನ್ನು ಹಂಚಿ ಹಬ್ಬಿಸುತ್ತಾ ಬಂದಿದೆ. ಆ ತರ್ಕ ಏನು? ನಾವು ಹಿಂದೂಗಳು ನಮ್ಮ ಅಶಕ್ತತೆಯಿಂದಾಗಿ ಸದಾ ದಾಳಿಗೆ, ಸುಲಿಗೆಗೆ ಒಳಗಾಗಿದ್ದೇವೆ ಎಂಬ ಆತ್ಮಮರುಕ ಹುಟ್ಟಿಸಿ ಅದನ್ನು ಕಿಸುರಾಗಿ ಪರಿವರ್ತಿಸಿ ಬಳಿಕ ಇದಕ್ಕೆ ಬೇಕಾದ ಬಲಿಪಶುವನ್ನು ಹುಡುಕುವುದು. ಇದು ಆತ್ಮವಂಚನೆಯ ಮಾತು ಎಂದು ಕನಿಷ್ಠ ಕಾಮನ್‌ಸೆನ್ಸ್ ಇದ್ದವನಿಗೆ ಅರ್ಥವಾಗುತ್ತದೆ. ನಮ್ಮಲ್ಲಿರುವ ಜಾತಿ ಶ್ರೇಣಿ, ಹುಟ್ಟಿನಿಂದಲೇ ವೃತ್ತಿ, ಸಾಮಾಜಿಕ ಸ್ಥಾನ ನಿರ್ಣಯವಾಗುವ ಜಾತಿ ಪದ್ಧತಿ, ವ್ಯವಸ್ಥಿತ ಸಮಾಜದೊಳಗೆ ಸೇರಿಸದೇ ದಲಿತರನ್ನು ಪಂಚಮರಾಗಿ ದೂರ ಇಟ್ಟಿದ್ದು- ಇವೆಲ್ಲಾ ನಮ್ಮ ‘ಹಿಂದೂ ಸ್ಥಾನ’ವನ್ನು ರೋಗಿಷ್ಠ ಮಾಡಿದೆ ಎಂದು ಅರಿಯಲು ಅಂತಃಸ್ಸಾಕ್ಷಿ ಇದ್ದರೆ ಸಾಕು. ಸಾವರ್ಕರ್ ಈ ತರ್ಕದ ಅಸಂಬದ್ಧತೆಯನ್ನು ಜಾಣವಾಗಿ ನಿವಾರಿಸಲು ನೋಡಿದ್ದರು. ಹೊರಗಿನಿಂದ ಬಂದು ನಮ್ಮನ್ನು ಶೋಷಿಸಿದ ಬ್ರಿಟಿಷರು, ಪೋರ್ಚುಗೀಸರು ದೇಶ ಬಿಟ್ಟು ತೊಲಗಿದ್ದಾರೆ. ಇನ್ನೀಗ... ಮುಸ್ಲಿಮರು ಅಂತ ವಾದ ಹೂಡುತ್ತಾರೆ. ಇದರ ಅಸಂಬದ್ಧತೆ ಯಾರಿಗಾದರೂ ಗೊತ್ತಾಗುತ್ತದೆ. ಈ ಸಾವರ್ಕರ್ ಮಾತನ್ನು. ತರ್ಕಕ್ಕಾದರೂ ಒಪ್ಪಿದರೆ... ಮುಸ್ಲಿಮ್ ಸಾಮ್ರಾಜ್ಯ ಕುಸಿದು ಮೂರು ಶತಮಾನವೇ ಕಳೆದಿತ್ತು,. ವಾಸ್ತವದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್, ಚರಿತ್ರೆಯನ್ನು ತನಗೆ ಬೇಕಾದಂತೆ ಸಾದರಪಡಿಸುತ್ತಾ ಬಂದಿತ್ತು ಅಷ್ಟೇ. ಆರಂಭಿಕ ಮುಸ್ಲಿಮ್ ದಾಳಿಕೋರರನ್ನು ಬಿಟ್ಟರೆ ಉಳಿದವರೆಲ್ಲಾ ಇಲ್ಲೇ ಹುಟ್ಟಿ ರಾಜ್ಯ ಕಟ್ಟಿ ಇಲ್ಲೇ ಅಳಿದವರು. ಹೊರಗಿನಿಂದ ಬಂದ ಮುಸ್ಲಿಮ್ ಅರಸರೂ ಇಡೀ ದೇಶವನ್ನೇನೂ ಸುತ್ತಿರಲಿಲ್ಲ. ಅವರ ಮಟ್ಟಿಗೆ ಭಾರತವೆಂದರೆ ಸಿಂಧು, ಯಮುನಾ ಅಷ್ಟೇ. ಇತಿಹಾಸ ನೋಡಿದರೆ ನಮ್ಮ ಅರಸರು ಪರಸ್ಪರ ರಾಜ್ಯ ವಿಸ್ತರಣೆಗೆ ಮಾಡಿದ ಯುದ್ಧಗಳು, ನಡೆಸಿದ ದಾಳಿ, ಕೊಳ್ಳೆ ಹೊಡೆದದ್ದು ಎಲ್ಲಾ ಗುರುತಿಸುತ್ತಾ ಹೋದರೆ ಇಡೀ ಭೂಪಟವೇ ಗೀಚು ಗೀಚಾಗುತ್ತದೆ. ದಕ್ಷಿಣ ಭಾರತದಲ್ಲೇ ಚೇರ, ಪಾಂಡ್ಯ,ಚೋಳ, ಗಂಗ, ಹೊಯ್ಸಳ,ಚಾಲುಕ್ಯ, ಮುಂತಾದ ರಾಜ್ಯಗಳು ಅದೆಷ್ಟು ಯುದ್ಧಗಳನ್ನು ಸಾರಿದರು ಎಂಬ ಲೆಕ್ಕ ತೆಗೆದರೆ ಸಾಕು.

ಈ ಸಾವರ್ಕರ್ ಬಗ್ಗೆ ಇತ್ತೀಚೆಗೆ ಅಮೆರಿಕದ ಚರಿತ್ರೆಯ ಪ್ರೊಫೆಸರ್ ಒಬ್ಬರು, ಸ್ವತಃ ಅನಾರೋಗ್ಯದಿಂದ ನರಳುತ್ತಿದ್ದ ಸಾವರ್ಕರ್ ತಮ್ಮ ಮನೋ ದೈಹಿಕ ಸ್ಥಿತಿಯನ್ನು ಇಡೀ ಹಿಂದೂ ಸಮಾಜಕ್ಕೆ ಅನ್ವಯಿಸುತ್ತಾ ತಮ್ಮ ತೀವ್ರ ನಿರಾಸೆ, ಆತಂಕಗಳ ಮೂಲಕವೇ ಹಿಂದುತ್ವದ ತರ್ಕ ಕಟ್ಟಿದರು ಅನ್ನುತ್ತಾರೆ. ಮಹಾರಾಷ್ಟ್ರದ ಆಢ್ಯ ಚಿತ್ಪಾವನ ಬ್ರಾಹ್ಮಣ ಸಮುದಾಯದ ಸಾವರ್ಕರ್‌ಗೆ ಚರಿತ್ರೆಯ ನೆನಪು ಮತ್ತು ದಾಖಲೆ ಎಂದರೆ ತಮ್ಮ ಜಾತಿ ಪೂರ್ವಜರಾದ ಪೇಶ್ವೆಗಳು ಕಟ್ಟಲೆತ್ನಿಸಿದ ಸಾಮ್ರಾಜ್ಯ. ಇಡೀ ದೇಶದ ಸಾಮ್ರಾಟರಾಗಬೇಕೆನ್ನುವ ಪೇಶ್ವಾಯಿಗಳ ಕನಸು ಮುರಿದು ಬಿದ್ದ ಕತೆ ಬಹುತೇಕ ಮಹಾರಾಷಟ್ಟ್ರೆದ ಬ್ರಾಹ್ಮಣರನ್ನು ಬಾಧಿಸುತ್ತಿತ್ತು. ಸಾವರ್ಕರ್ ಆ ಬೀಜದ ಹೆಮ್ಮರ.

    ಮುಸ್ಲಿಮ್ ಮೇಲೆ ಗೂಬೆ ಕೂರಿಸುವುದು ಬಲು ಸುಲಭದ ಕೆಲಸ ಎಂಬುದು ಆರೆಸ್ಸೆಸ್‌ಗೆ ಎಂದೋ ಗೊತ್ತಿತ್ತು. ಆದರೆ ಸ್ವಾತಂತ್ರ್ಯಾನಂತರ ಐವತ್ತು ವರ್ಷ ಬಹುತೇಕ ಈ ಸಮುದಾಯ ದಲಿತರಿಗಿಂತ ಕೊಂಚ ಮೇಲೆ, ಒಬಿಸಿ ಮಟ್ಟದಲ್ಲೇ ನರಳುತ್ತಿದ್ದ ಕಾರಣ ಈ ಕ್ಯಾಂಪೇನ್ ಹೆಚ್ಚು ಹುರಿಗೊಳ್ಳಲಿಲ್ಲ. ಆದರೆ ಅಂತರ್‌ರಾಷ್ಟ್ರೀಯವಾಗಿ ಮುಸ್ಲಿಮ್ ಮೂಲಭೂತವಾದ ಬೆಳೆಯುತ್ತಾ ಬಂದು, ಯುಎಇ ಕರ್ಮಠ ಇಸ್ಲಾಮನ್ನು ಪೋಷಿಸಿ,, ಬಹುತೇಕ ಮುಸ್ಲಿಮ್ ದೇಶಗಳು ಪ್ರಜಾಸತ್ತೆಗೆರವಾಗಿ ಧರ್ಮ/ ರಾಜಶಾಹಿ/. ಸರ್ವಾಧಿಕಾರದಲ್ಲಿ ನರಳುತ್ತಾ ಇದ್ದಂತೆ, ತನ್ನ ತೈಲ ರಾಜಕೀಯದ ಭಾಗವಾಗಿ ಇಡೀ ಮುಸ್ಲಿಂ ದೇಶ- ಜನತೆಯನ್ನೇ ರಾಕ್ಷಸರಂತೆ ಬಿಂಬಿಸುವ ಅಮೆರಿಕಾದ ಯತ್ನ ಯಶಸ್ವಿಯಾಯಿತು. ಒಬ್ಬ ಒಸಾಮಾ,, ಒಂದು ತಾಲಿಬಾನ್ ಇಸ್ಲಾಮಿನ ರಾಕ್ಷಸೀ ಸ್ವಭಾವದ ರೂಪಕವಾಯಿತು. ಆದರೆ ಈ ದೇಶಗಳ ಬಡವರು ಹೊಟ್ಟೆಗಿಲ್ಲದೇ, ನಿರಾಶ್ರಿತರಾಗಿ ವಲಸೆಹೋದಾಗ,? ಅವರೂ ಮುಸ್ಲಿಮರಲ್ಲವೇ ಎಂಬ ಸರಳ ಸತ್ಯವೂ ಕಾಣದಾಯಿತು.

 ಆರೆಸ್ಸೆಸ್‌ಗೆ ಭೀಮಬಲ ಬಂದಿದ್ದು ಈ ಅಮೆರಿಕಾದ ಮಾಧ್ಯಮಗಳು ಕಟ್ಟಿಕೊಟ್ಟ ಮುಸ್ಲಿಂ ಚಿತ್ರದಿಂದ. ಇಲ್ಲೂ ಅದನ್ನೇ ಸುಲಭವಾಗಿ ಇಳಿಸುವುದು ಸಾಧ್ಯವಾಯಿತು.

 ಆದರೆ, ಹಿಂದೂಗಳ ಸೋಲಿಗೆ ಸಾಬರು ಕಾರಣ ಎಂಬ ವಾದಕ್ಕೆ ಇಂದಿಗೂ ಆರೆಸ್ಸೆಸ್‌ಗೆ ಪುರಾವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

    ಅವರನ್ನು ಆರೆಸ್ಸೆಸ್ ಮತ್ತು ಅದರ ಚೇಳಿನ ಮರಿಗಳಾದ ಭಾಜಪ ನಾಯಕರು ಟಠಿಛ್ಞಿಠಿಜಿಚ್ಝ ಠಿಜ್ಟಛಿಠಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆದಕ್ಕೇ ಈ ನಾಯಕರು ಪದೇ ಪದೇ ‘‘ತಾಲಿಬಾನ್ ಆಗಗೊಡುವುದಿಲ್ಲ, ಮದ್ರಸಾಗಳು ಮೂಲಭೂತವಾದ ಮತ್ತು ಭಯೋತ್ಪಾದನೆಯ ನರ್ಸರಿಗಳು’’ ಎಂದೆಲ್ಲಾ ಮಾತಾಡುತ್ತಿರುತ್ತಾರೆ.

 ಇದು ಬಹು ಮುಖ್ಯ ತಂತ್ರ. ಶೇಕ್ಸ್‌ಪಿಯರ್ ತನ್ನ ಜೂಲಿಯಸ್ ಸೀಸರ್ ನಾಟಕದಲ್ಲಿ ಈ ತಂತ್ರದ ಗಾಢ ಮಾತೊಂದನ್ನು ತರುತ್ತಾನೆ.

     ಸೀಸರನನ್ನು ಯಾಕೆ ಕೊಂದೆವು ಎಂದು ಬ್ರೂಟಸ್ ಸಮರ್ಥಿಸಿಕೊಳ್ಳುವಾಗ, ಮೊಟ್ಟೆಯೊಡೆದು ಹೊರಬರುವ ಎಳೆ ನಾಗರ ಮರಿಯೊಂದು ಬೆಳೆದು ದೊಡ್ಡ ವಿಷಕಾರಿ ಹಾವಾಗುವುದನ್ನು ತಪ್ಪಿಸಲು ಅದು ಮೊಟ್ಟೆಯಲ್ಲಿದ್ದಾಗಲೇ ಸಾಯಿಸುವುದು ವಾಸಿ ಎಂಬರ್ಥದಲ್ಲಿ ಮಾತಾಡುತ್ತಾನೆ.

   ಆತ ಕೊಡುವ ಹೋಲಿಕೆಯೇ ಅಸಂಬದ್ಧ. ವಿಷಜಂತುಗಳು ತಮ್ಮ ದೈಹಿಕ ಗುಣ ಮತ್ತು ಜನ್ಮಜಾತ ಗುಣವನ್ನು ಬದಲಾಯಿಸುವುದಿಲ್ಲ. ಆದರೆ ಮನುಷ್ಯ ತನ್ನ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾನೆ.

   ಉದಾರವಾದಿ ಮೌಲ್ಯಗಳ ಖಜಾನೆಯೆಂದೇ ನಾವು ಭಾವಿಸುವ ಪಾಶ್ಚಿಮಾತ್ಯ/ಬ್ರಿಟಿಷ್ ನಿಲುವು ಕೂಡಾ ಇದಕ್ಕಿಂತ ಭಿನ್ನವಿರಲಿಲ್ಲ. ಕೇಡಿನ ಸ್ವಭಾವವೊಂದು ವಂಶ ಪಾರಂಪರ್ಯವಾಗಿ ಸಮುದಾಯಗಳಲ್ಲಿ ಇಳಿದು ಬರುತ್ತದೆ ಎಂಬ ತತ್ವವನ್ನು ನಂಬಿದಂತೆ ನಟಿಸಿ, ಬ್ರಿಟಿಷರು ಕ್ರಿಮಿನಲ್ ಟ್ರೈಬ್ಸ್ ಎಂಬ ಹಣೆ ಪಟ್ಟಿ ಮೂಲಕ ನೂರಾರು ಸಮುದಾಯಗಳನ್ನು ಅಂಚಿಗೆ ತಳ್ಳಿದ್ದು ಅಲ್ಲವೇ? ಇದಕ್ಕೆ ಯಾವ ವೈಜ್ಞಾನಿಕ ಪುರಾವೆಯೂ ಇರಲಿಲ್ಲ. ಆದರೆ ಆಡಳಿತಾತ್ಮಕವಾಗಿ ಇಂತಹ ನಿಲುವು ತೆಗೆದುಕೊಂಡು ಅದನ್ನು ಒಂದು ಪ್ರಭುತ್ವ ತನ್ನ ಎಲ್ಲೆಯ ಮೂಲೆ ಮೂಲೆಗೂ ಪಸರಿಸಿದರೆ ಒಂದೇ ತಲೆಮಾರಿಗೆ ಈ ಸೂಚಿ ನಿಜವೆಂದು ಸಮಾಜ ನಂಬುತ್ತೆ.

     ಇಪ್ಪತ್ತನೇ ಶತಮಾನದ ವೇಳೆಗೆ ನಮ್ಮವರೇ ಆಗಿದ್ದ ಸಮುದಾಯಗಳನ್ನು ಅವರೆಲ್ಲಾ ಕ್ರಿಮಿನಲ್ಲುಗಳು ಎಂಬಂತೆ ಪರಿಗಣಿಸಿ ನಾವು ಛೀ ಥೂ ಅಂದೆವು. ಈಗಲೂ ಅದನ್ನೇ ಮುಂದುವರಿಸಿದ್ದೇವೆ. ಈ ಧೋರಣೆಯನ್ನು ಮುಸ್ಲಿಮ್ ಕೇಂದ್ರಿತವಾಗಿ ಆರೆಸ್ಸೆಸ್ ಮಾಡುತ್ತಾ ಬಂದಿದೆ. ಈಗ ಅದಕ್ಕೆ ತನ್ನದೇ ಆಡಳಿತದ ಪ್ರತ್ಯಕ್ಷ ಬೆಂಬಲ ಬೇರೆ ಇದೆ. ಈ ರಾಕ್ಷಸೀಕರಣ/ಅಪರಾಧೀಕರಣ ಒಂದೆಡೆಯಾದರೆ ಅದರ ಬಾಹ್ಯ ಸಂಕೇತ ಸ್ವರೂಪಗಳೂ ತನಗೆ ಒಪ್ಪಿತವಲ್ಲ ಎಂದು ಒತ್ತಡಪೂರ್ವಕವಾಗಿ ಬಿಂಬಿಸುವುದೂ ಮುಖ್ಯ. ಹೀಗೆ ಬಿಂಬಿಸಿದರೆ ಇಡೀ ಬಹುಸಂಖ್ಯಾತ ಸಮುದಾಯ- ಮುಸ್ಲಿಮರನ್ನು ಅಂಚಿನ ಬಹಿಷ್ಕೃತ ಸಮುದಾಯವಾಗಿ ಭಾವಿಸಲು ಶುರು ಮಾಡುತ್ತೆ. ಹಿಜಾಬಿನಲ್ಲೂ ನಡೆದಿರುವುದೂ ಇದೇ ಸಂಗತಿ. ಈ ಕಿಸುರು, ಮಾತ್ಸರ್ಯ, ದ್ವೇಷವನ್ನೇ ಬಹುಸಂಖ್ಯಾತ ಸಮುದಾಯದ ಕಣ್ಣೋಟವಾಗಿ ಬಿಂಬಿಸಿ, ಅಧಿಕಾರ ಹಿಡಿವ ತಾತ್ವಿಕತೆ ಅತ್ಯಂತ ಕರಾಳವಾದದ್ದು. ರಾಜಶಾಹಿಯಲ್ಲೂ ಇಂತಹ ತಾತ್ವಿಕ ಸಮೀಕರಣ ನಡೆದಿರಲಿಲ್ಲ. ಒಮ್ಮೆ ಈ ಸಮುದಾಯವನ್ನೇ ಅಪರಾಧೀಕರಣದ ಇಮೇಜ್ ಒಳಗೆ ಬಂಧಿಸಿಟ್ಟರೆ ಅದರಿಂದ ಹೊರಬರಲು ಶತಮಾನವೇ ಬೇಕೇನೋ. ಪ್ರಜಾಸತ್ತೆಯ ಮೂಲ ಮೌಲ್ಯಗಳಾದ, ಸ್ವಾತಂತ್ರ, ಸಮಾನತೆ, ಭ್ರಾತೃತ್ವಗಳನ್ನೂ ಸಮಾಧಿ ಮಾಡದೇ ಈ ಅಂಚಿಗೆ ಸರಿಸುವ ಪ್ರಯತ್ನ ಸಾಧ್ಯವಿಲ್ಲ. ಈ ದುರಂತವನ್ನು ತಡೆಯಲು ಇರುವ ಏಕಮಾತ್ರಾ ರಕ್ಷಕ ತಾಯಿತ ನಮ್ಮ ಸಂವಿಧಾನ. ಅದನ್ನು ಹರಿದುಮುಕ್ಕಿದರೆ, ಈ ಅಪರಾಧೀಕರಣ ಮತ್ತು ಕಿಸುರಿನ ಮುಂದಿನ ಬಲಿ ದಲಿತರು, ಬಳಿಕ ಹಿಂದುಳಿದ ಸಮುದಾಯಗಳು. ಆರೆಸ್ಸೆಸ್ ಈ ಅಮಾನುಷ ತಾತ್ವಿಕತೆಯ ಮೂಲಕ ಬಹುಸಂಖ್ಯಾತರ ಒಪ್ಪಿಗೆಯ ಸೋಗಿನಲ್ಲಿ ನಿರಂಕುಶ ಅಧಿಕಾರ ಪಡೆಯಬಹುದು. ಆದರೆ ದೇಶ ಕಟ್ಟುವುದು ಸಾಧ್ಯವಿಲ್ಲ.

Writer - ಕೆ.ಪಿ. ಸುರೇಶ

contributor

Editor - ಕೆ.ಪಿ. ಸುರೇಶ

contributor

Similar News