ತಮಿಳುನಾಡು ಶಾಲಾ ಬಾಲಕಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ ವಿರುದ್ಧ ಪೊಲೀಸರ ಮನವಿ ಆಲಿಸಲು ಸುಪ್ರೀಂಕೋರ್ಟ್ ಸಮ್ಮತಿ

Update: 2022-02-14 18:09 GMT

ಹೊಸದಿಲ್ಲಿ, ಫೆ. 14: ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐಗೆ ಅನುಮತಿ ನೀಡಿದೆ. ವಿದ್ಯಾರ್ಥಿನಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ತಮಿಳುನಾಡಿನ ಡಿಜಿಪಿ ಸಿ. ಶೈಲೇಂದ್ರ ಬಾಬು ಅವರು ಸಲ್ಲಿಸಿದ ಮನವಿಯ ಕುರಿತಂತೆ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸು ನೀಡಿತು. ‌

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದಂತೆ ತನಿಖೆ ಮುಂದುವರಿಯಲಿ ಎಂದು ಸುಪ್ರೀಂ ಕೋರ್ಟ್ ಹೇಳಿತು. ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ತಮಿಳುನಾಡು ಡಿಜಿಪಿ ಸಿ. ಶೈಲೇಂದ್ರ ಬಾಬು ಅವರಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠ ನೋಟಿಸು ನೀಡಿತು. 17 ವರ್ಷದ ಬಾಲಕಿಯ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಮದ್ರಾಸ್ ಉಚ್ಚ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಫೆಬ್ರವರಿ 3ರಂದು ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿತ್ತು. 

ಉಚ್ಚ ನ್ಯಾಯಾಲಯದ ಮಧುರೈ ಪೀಠದ ಏಕ ಸದಸ್ಯ ಪೀಠ ನೀಡಿದ ಆದೇಶದ ಸಿಂಧುತ್ವವನ್ನು ತಮಿಳುನಾಡು ಡಿಜಿಪಿ ಮೂಲಕ ರಾಜ್ಯ ಸರಕಾರ ಪ್ರಶ್ನಿಸಿತ್ತು. ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ಜನವರಿ 31ರಂದು ಸಿಬಿಐಗೆ ವರ್ಗಾಯಿಸಿತ್ತು. ತಂಜಾವೂರಿನ 17 ವರ್ಷದ ಬಾಲಕಿಯೋರ್ವಳು ತನ್ನ ನಿವಾಸದಲ್ಲಿ ಜನವರಿ 9ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವೀಡಿಯೊವೊಂದರಲ್ಲಿ ಬಾಲಕಿ ಹಾಸ್ಟೆಲ್ನಲ್ಲಿ ವಾರ್ಡನ್ ಹಾಸ್ಟೆಲ್ ಸ್ವಚ್ಛಗೊಳಿಸುವಂತೆ ಹಾಗೂ ಕೆಲಸ ನಿರ್ವಹಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ. ಇದಲ್ಲದೆ, ತಮ್ಮ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸಲಾಗಿದೆ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದರು. ಹಾಸ್ಟೆಲ್ನ ವಾರ್ಡನ್ ಅನ್ನು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಹಾಗೂ ಆತ್ಮಹತ್ಯೆಗೆ ಉತ್ತೇಜನ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News