×
Ad

ಅನುದಾನ ಬಿಡುಗಡೆಯಲ್ಲಿ ತಾರತಮ್ಯ: ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನ

Update: 2022-02-14 22:36 IST
photo- twitter 

ಬೆಂಗಳೂರು, ಫೆ.14: ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿರುವ ಸರಕಾರದ ಧೋರಣೆ ವಿರುದ್ಧ ತೀವ್ರ ಹೋರಾಟ ನಡೆಸಲು ಶಾಸಕಾಂಗ ಸಭೆ ತೀರ್ಮಾನಿಸಿದೆ. 

ಸೋಮವಾರ ಪ್ರತಿಪಕ್ಷ ನಾಯ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನ ಬಿಡುಗಡೆ ವಿಚಾರ ಕುರಿತು ಸುದೀರ್ಘ ಸಮಾಲೋಚನೆ ನಡೆಯಿತು. 

ಬಿಟ್ ಕಾಯಿನ್, ಶೆ.40 ಪಸೆರ್ಂಟ್ ಕಮಿಷನ್ ಸೇರಿದಂತೆ ಸರಕಾರದ ವಿವಿಧ ಹಗರಣಗಳ ಬಗ್ಗೆಯೂ ಸದನದಲ್ಲಿ ಚಾಟಿ ಬೀಸಲು ನಿರ್ಧರಿಸಲಾಗಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನಯಾ ಪೈಸೆ ಇಲ್ಲ ಎಂದು ಶಾಸಕರು ಹೇಳಿದರು. 

ಸಭೆಯ ಆರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳೇ ತುಂಬಿವೆ. ನಮ್ಮ ಸರಕಾರ ಇದ್ದಾಗ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನೂ ಅದರಲ್ಲಿ ಸೇರಿಸಲಾಗಿದೆ ಎಂದರು. 

ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಕೇಳಿದರೆ ಕೋವಿಡ್ ನೆಪ ಹೇಳಲಾಗುತ್ತಿದೆ. ಅರ್ಥಿಕವಾಗಿ ರಾಜ್ಯ ದಿವಾಳಿ ಆಗಿದೆ. ಹಣಕಾಸು ಪರಿಸ್ಥಿತಿ ಕೆಟ್ಟದಾಗಿದೆ. ರಾಜ್ಯದಿಂದ ಪ್ರತಿ ವರ್ಷ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರವಾಗುತ್ತದೆ. ಆದರೆ ಕೇಂದ್ರ ಸರಕಾರ ನಮಗೆ ನೀಡುವ ಪರಿಹಾರ 50-60 ಸಾವಿರ ಕೋಟಿ ಮಾತ್ರ.

ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆಯನ್ನು ಸರಕಾರ ಹೊಸದಾಗಿ ಕೊಟ್ಟಿಲ್ಲ. ಪತ್ರಿಕೆಗಳಿಗೆ ನಿತ್ಯ ಜಾಹಿರಾತು ನೀಡುತ್ತಿರುವ ಸರಕಾರ ಅದರಲ್ಲಿಯೂ ಸುಳ್ಳುಗಳನ್ನು ಹೇಳಿದೆ. ನೀರಾವರಿಗೆ ಒಂದು ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದ ಸರಕಾರ ಅದರಲ್ಲಿಯೂ ವಿಫಲವಾಗಿದೆ. ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವುದನ್ನು ಹೊರತುಪಡಿಸಿದರೆ ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೂ ಹಣ ಕೊಟ್ಟಿಲ್ಲ. 

ಗುತ್ತಿದಾರರ ಸಂಘ ಸರಕಾರದ ವಿರುದ್ಧ ಮಾಡಿರುವ ಶೇ.40 ಪಸೆರ್ಂಟ್ ಕಮಿಷನ್ ಆರೋಪ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗ ರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್, ಹಿರಿಯ ಮುಖಂಡರಾದ ದೇಶಪಾಂಡೆ, ಎಚ್.ಕೆ. ಪಾಟೀಲ್, ಎಐಸಿಸಿಯ ಚುನಾವಣಾ ವೀಕ್ಷಕರಾದ ಸುದರ್ಶನ ನಾಚಿಯಪ್ಪನ್, ಅಬ್ರಹಾಂ ಅವರು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News