ಹುಮ್ನಾಬಾದ್: ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತ ಬಿಎಸ್ಪಿ ಮುಖಂಡನ ಬಿಡುಗಡೆ
ಬೀದರ್, ಫೆ.15: ರಾಯಚೂರಿನಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ವಿರುದ್ಧ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಮನವಿ ಸ್ವೀಕರಿಸಲು ವಿಳಂಬ ಮಾಡಿದ್ದರೆನ್ನಲಾದ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಎಸ್ಪಿ ಮುಖಂಡ ಅಂಕುಶ್ ಗೋಖಲೆ ಸೋಮವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಹುಮ್ನಾಬಾದ್ ಕಾರಾಗೃಹದಿಂದ ಹೊರಬಂದ ಅಂಕುಶ್ ಗೋಖಲೆ ಅವರಿಗೆ ದಲಿತ ಸಂಘಟನೆಗಳ ಮುಖಂಡರು ಅದ್ದೂರಿ ಸ್ವಾಗತ ಕೋರಿದರು.
ಜನವರಿ 27ರಂದು ಹುಮ್ನಾಬಾದ್ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ವೇಳೆ ಮನವಿ ಪತ್ರ ಸ್ವೀಕರಿಸಲು ಅಲ್ಲಿನ ತಹಶಿಲ್ದಾರ್ ವಿಳಂಬ ಮಾಡಿದ್ದನ್ನು ಪ್ರಶ್ನಿಸಿದ ಕಾರಣ ಸುಳ್ಳು ಆರೋಪದ ಮೇಲೆ ಅಂಕುಶ್ ಗೋಖಲೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.
ರಾಯಚೂರು ಜಿಲ್ಲಾ ನ್ಯಾಯಾಧೀಶರ ಅಮಾನತು ಮಾತ್ತು ಜಾತಿ ನಿಂದನೆ ಮಾಡಿದ ಹುಮ್ನಾಬಾದ್ ತಹಶೀಲ್ದಾರರ ವಜಾ ಆಗುವವರೆಗೆ ಹೋರಾಟ ನಿಲ್ಲದು ಎಂದು ಅಂಕುಶ ಗೋಖಲೆ ಹೇಳಿದ್ದಾರೆ.