×
Ad

ರೈತನಿಗೆ ಪರಿಹಾರ ನೀಡುವಲ್ಲಿ ವಿಳಂಬ: ಕಲಬುರಗಿ ಜಿಲ್ಲಾಧಿಕಾರಿಯ ಕಾರು ಜಪ್ತಿಗೆ ಆದೇಶಿಸಿದ ನ್ಯಾಯಾಲಯ

Update: 2022-02-15 13:43 IST

ಕಲಬುರಗಿ, ಫೆ.15: ಭೀಮಾ ಎತ್ತು ನೀರಾವರಿಯ ಯೋಜನೆಯ ಅಭಿವೃದ್ಧಿಗೆ ಜಮೀನು ನೀಡಿದ್ದ ರೈತನೋರ್ವನಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದ ಕಾರಣಕ್ಕೆ ಕಲಬುರಗಿ ಜಿಲ್ಲಾಧಿಕಾರಿಯ ಕಾರನ್ನು ಜಪ್ತಿ ಮಾಡಿರುವ ಘಟನೆ ಇಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.

ಅಫ್ಝಲ್ ಪುರ ತಾಲೂಕಿನ ಉಡಚಣ ನಿವಾಸಿಯಾಗಿರುವ ಕಲ್ಲಪ್ಪ ನಾಗಪ್ಪ ಮೈತ್ರಿ ಎಂಬವರು ಭೀಮಾ ಎತ್ತು ನೀರಾವರಿಯ ಯೋಜನೆಯ ಅಭಿವೃದ್ಧಿಗಾಗಿ 2013ರಲ್ಲಿ 33 ಗುಂಟೆ ಜಮೀನು ನೀಡಿದ್ದರು. ಈ ಜಮೀನಿಗೆ ಪರಿಹಾರ ನೀಡುವಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯವು 2019ರಲ್ಲಿ ಆದೇಶ ನೀಡಿತ್ತು. ಅದರಂತೆ ಕಲ್ಲಪ್ಪರಿಗೆ 7.41 ಲಕ್ಷರ ರೂ. ಪರಿಹಾರ ಸಿಗಬೇಕಿತ್ತು. ಆದರೆ ಇದುವರೆಗೆ ಸಂತ್ರಸ್ತರಿಗೆ ಪರಿಹಾರ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಲ್ಲಪ್ಪ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಬಗ್ಗೆ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶದಂತೆ ಭೂ ಸಂತ್ರಸ್ತರಿಗೆ ಪರಿಹಾರ ನೀಡದ ಕಾರಣ ಕಲಬುರಗಿ ಜಿಲ್ಲಾಧಿಕಾರಿಯ ಕಾರನ್ನು ಜಪ್ತಿ ಮಾಡಲು ಜಿಲ್ಲಾ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸಂತ್ರಸ್ತನಿಗೆ ಪರಿಹಾರದ ಮೊತ್ತ ನೀಡುವವರೆಗೆ ಅಥವಾ ನ್ಯಾಯಾಲಯದ ಮುಂದಿನ ಆದೇಶದವರೆಗೆ ಕಾರನ್ನು ವಶದಲ್ಲಿರಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಅದರಂತೆ ಸಂಬಂಧಪಟ್ಟ ಅಧಿಕಾರಿಗಳು ಕಾರು ಜಪ್ತಿಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News