×
Ad

ಮಡಿಕೇರಿ: ಹುಲಿ ಚರ್ಮ, ಅಂಗಾಂಗಗಳ ಮಾರಾಟ ಯತ್ನ; ನಾಲ್ವರು ಆರೋಪಿಗಳ ಬಂಧನ

Update: 2022-02-15 19:29 IST

ಮಡಿಕೇರಿ ಫೆ.15: ಹುಲಿಯ ಚರ್ಮ ಮತ್ತು ಅಂಗಾಂಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.

ಮಾಲ್ದಾರೆ ತಟ್ಟಳ್ಳಿ ಹಾಡಿ ನಿವಾಸಿಗಳಾದ ಜೆ.ಜೆ.ರಾಜೇಶ್(34), ಜೆ.ಜೆ.ಹರೀಶ್(32), ಜೆ.ಕೆ.ಮನು(28) ಹಾಗೂ ಜೆ.ಬಿ.ರಮೇಶ್(28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 1 ಹುಲಿಯ ಚರ್ಮ, 7 ಉಗುರುಗಳು, 2 ಕಾಲು ಮತ್ತು ಹುಲಿಯ 9 ಮೀಸೆಗಳನ್ನು ವಶಕ್ಕೆ ಪಡೆಯಲಾಗಿದೆ.

ಫೆ.14ರಂದು ಆರೋಪಿಗಳು ನಾಗರಹೊಳೆ ಹುಲಿ ಸಂರಕ್ಷಣಾ ಬಫರ್ ವಲಯದಲ್ಲಿ ಸತ್ತು ಬಿದ್ದಿದ್ದ ಹುಲಿಯ ಚರ್ಮ ಮತ್ತು ಇತರ ವಸ್ತುಗಳನ್ನು ಪಡೆದುಕೊಂಡಿದ್ದರು. ಬಳಿಕ ಸಿದ್ದಾಪುರ ಮಾಲ್ದಾರೆ ಮುಖ್ಯ ರಸ್ತೆಯ ಕಾಫಿ ತೋಟ ಒಂದಕ್ಕೆ ಹೊಂದಿಕೊಂಡಂತಿರುವ ರಸ್ತೆ ಬದಿಯಲ್ಲಿ ಹುಲಿಯ ಚರ್ಮ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಮಾಹಿತಿ ಪಡೆದ ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಕರಣದ ಕುರಿತು ತನಿಖೆಯನ್ನು ಮುಂದುವರೆಸಲಾಗಿದೆ  ಎಂದು ಅರಣ್ಯ ಸಂಚಾರಿ ದಳ ತಿಳಿಸಿದೆ. ವಶಕ್ಕೆ ಪಡೆಯಲಾದ ಸ್ವತ್ತುಗಳು ಮತ್ತು ಆರೋಪಿಗಳನ್ನು ಆನೆಚೌಕೂರು ವಲಯದ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಅರಣ್ಯ ಸಂಚಾರಿ ದಳದ ಐಜಿಪಿ ಶರತ್‍ಚಂದ್ರ, ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‍ಐ ಸವಿ, ಸಿಬ್ಬಂದಿಗಳಾದ ಶೇಖರ್, ಬಿ.ಕೆ.ರಾಜೇಶ್, ಯೋಗೇಶ್, ರಾಘವೇಂದ್ರ, ಮೋಹನ್, ಸ್ವಾಮಿ ಮತ್ತು ಮಂಜುನಾಥ್ ಅವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News