ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದ್ದಕ್ಕೆ ಗ್ರಾಮಸ್ಥರ ಮೇಲೆ ಸಿ.ಟಿ.ರವಿ ಬೆಂಬಲಿಗರಿಂದ ಹಲ್ಲೆ; ಆರೋಪ
ಚಿಕ್ಕಮಗಳೂರು, ಫೆ.15: ಗ್ರಾಮದಲ್ಲಿ ಕೈಗೊಂಡಿದ್ದ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಕ್ಕೆ ಕುಪಿತರಾದ ಸಿ.ಟಿ.ರವಿ ಬೆಂಬಲಿಗರು ಗ್ರಾಮಸ್ಥರ ಮೇಲೆಯೇ ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಿಜೆಪಿ ಮುಖಂಡರು ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆ ಮಾಡಿರುವ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ತಿಗರಿಹಂಕಲ್ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಗಾಳಿಪೂಜೆ ಗ್ರಾಮಕ್ಕೆ ರವಿವಾರ ಶಾಸಕ ಸಿ.ಟಿ.ರವಿ ಭೇಟಿ ನೀಡಿದ್ದು, ಈ ವೇಳೆ ಸರಕಾರದಿಂದ ಮಂಜೂರಾದ ರಸ್ತೆ ಕಾಮಗಾರಿಯ ಅಭಿವೃದ್ಧಿಯನ್ನು ಸಿ.ಟಿ.ರವಿ ಪರಿಶೀಲಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ರಸ್ತೆ ಕಾಮಗಾರಿಯನ್ನು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಳಪೆ ಕಾಮಗಾರಿ ಮಾಡಿದ್ದು, ಕಾಮಗಾರಿ ಪೂರ್ಣವಾಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ತಾಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ವೈ.ಜಿ.ಸುರೇಶ್ ಹಾಗೂ ಅವರ ಬೆಂಬಲಿಗರು ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರಿಗೆ ನಿಂದಿಸಿದಲ್ಲದೇ ಹಲ್ಲೆಯನ್ನೂ ಮಾಡಿದ್ದಾರೆಂದು ತಿಳಿದು ಬಂದಿದ್ದು, ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತೆಂದು ತಿಳಿದು ಬಂದಿದೆ.
ಸಿ.ಟಿ.ರವಿ ಬೆಂಬಲಿಗರು ಗ್ರಾಮಸ್ಥರ ಮೇಲೆ ನಡೆಸಿದ ಹಲ್ಲೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಅಮಾಯಕ ಗ್ರಾಮಸ್ಥರ ವಿರುದ್ಧ ದರ್ಪ ಮೆರೆದು ಹಲ್ಲೆ ನಡೆಸಿರುವ ಬಿಜೆಪಿ ಮುಖಂಡರ ವಿರುದ್ಧ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಿ.ಟಿ.ರವಿ ಅವರು ತಮ್ಮ ಕ್ಷೇತ್ರಕ್ಕೆ ಕೋಟ್ಯಂತರ ರೂ. ಅನುದಾನ ತಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಅನುದಾನ ಎಲ್ಲಿ ಹೋಗುತ್ತಿದೆಯೋ ಗೊತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಅವರ ಅನುದಾನದಡಿಯಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿವೆ. ಇಂತಹ ಕಾಮಗಾರಿಗಳ ವಿರುದ್ಧ ಆರೋಪ ಮಾಡುವ ಗ್ರಾಮಸ್ಥರಿಗೆ ರವಿವಾರ ಗಾಳಿಪೂಜೆ ಗ್ರಾಮದಲ್ಲಿ ಹಲ್ಲೆ ಮಾಡಲಾಗಿದೆ. ಸಿ.ಟಿ.ರವಿ ಬೆಂಬಲಿಗರೇ ಹಲ್ಲೆ ಮಾಡಿರುವ ಘಟನೆಯ ವಿಡಿಯೊ ವೈರಲ್ ಆಗಿದ್ದು, ಅಮಾಯಕ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ ಗೂಂಡಾಗಳ ಮೇಲೆ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು.
- ಸಂತೋಷ್, ಅಂಬೇಡ್ಕರ್ ಸೇನೆ ಮುಖಂಡ