ಹಿಜಾಬ್ ಪ್ರಕರಣ: ಶಿವಮೊಗ್ಗ ನಗರದಾದ್ಯಂತ ಫೆ.16ರಂದು ನಿಷೇಧಾಜ್ಞೆ ಜಾರಿ; ಮೂರು ಕಾಲೇಜುಗಳಿಗೆ ರಜೆ ಘೋಷಣೆ

Update: 2022-02-15 16:40 GMT

ಶಿವಮೊಗ್ಗ, ಫೆ.15:  ಹಿಜಾಬ್, ಕೇಸರಿ ಶಾಲು ಸಂಘರ್ಷದ ಬಳಿಕ ಶಿವಮೊಗ್ಗದಲ್ಲಿ ಕಾಲೇಜುಗಳು ನಾಳೆ ಪುನಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಡಾ.ನಾಗರಾಜ್ ಅವರು ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದಾದ್ಯಂತ ಫೆಬ್ರವರಿ 16ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 19ರ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ, ಧರ್ಮ ಸೂಚಕ ವಸ್ತ್ರಗಳನ್ನು ಧರಿಸುವುದು, ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಹೈಕೋರ್ಟ್ ಮಧ್ಯಂತರ ತೀರ್ಪನ್ನು ಪಾಲಿಸಬೇಕು.ಯಾವುದೆ ಸಂಘಟನೆಗಳು ವಿದ್ಯಾರ್ಥಿಗಳ ಸಂಘಟನೆ ಮಾಡುವುದು, ಪ್ರಚೋದಿಸುವುದು ಕೂಡ ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್, ಕೇಸರಿ ಶಾಲು ಕುರಿತು ಯಾವುದೆ ರೀತಿಯ ಚರ್ಚೆ ನಡೆಸುವಂತಿಲ್ಲ.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತಲೂ ಹೆಚ್ಚಿನ ಜನರು ಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಮೂರು ಕಾಲೇಜುಗಳಿಗೆ ನಾಳೆ ರಜೆ

ಶಿವಮೊಗ್ಗ  ಬಾಪೂಜಿ ನಗರದ ಪದವಿ ಕಾಲೇಜು, ಸೈನ್ಸ್ ಮೈದಾನದ ಬಳಿಯ ಸರ್ಕಾರಿ ಪಿಯು ಕಾಲೇಜು ಹಾಗೂ ಸಾಗರದ ಸರ್ಕಾರಿ ಪಿಯು ಕಾಲೇಜಿಗೆ ಫೆಬ್ರವರಿ 16 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News