×
Ad

ಅಟ್ಟಿಸಿಕೊಂಡು ಹೋಗಲು ಶಿಕ್ಷಣ ಪಡೆಯುವ ಮಕ್ಕಳೇನು ಭಯೋತ್ಪಾದಕರೇ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನೆ

Update: 2022-02-15 22:17 IST

ಮೈಸೂರು,ಫೆ.15: ಶಿಕ್ಷಣವು ಜಾತಿ ಧರ್ಮಗಳನ್ನು ಮೀರಿ, ಹೆಣ್ಣು ಮಕ್ಕಳನ್ನು ಸಬಲಗೊಳಿಸುವಂತಹ ಪ್ರಮುಖ ಶಕ್ತಿ. ಈ ಸಂಗತಿಯನ್ನು ಅರಿತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಸರ್ಕಾರಗಳು ಧಾರ್ಮಿಕ ಭಯೋತ್ಪಾದನೆಯ ವಾತಾವರಣವನ್ನು ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ಈ ದೃಶ್ಯ ನೋಡಿ ನನಗೆ ನಿಜಕ್ಕೂ ಬೇಸರ ಎನಿಸಿತು. ಶಿಕ್ಷಣದ ವಿಷಯದಲ್ಲಿ ಜವಾಬ್ದಾರಿಯುತ ನಡವಳಿಕೆ ತೋರಬೇಕಾದ ಮಾಧ್ಯಮಗಳು ಒಬ್ಬರಲ್ಲಿ ಭಯ ಮೂಡಿಸುವಂತೆ ಅವರನ್ನು ಹಿಂಬಾಲಿಸುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಇಂತಹ ನಡವಳಿಕೆಗಳು ಪ್ರಜಾಪ್ರಭುತ್ವದ ಕಾವಲುಗಾರರು ಎಂಬ ಮಾಧ್ಯಮದ ಹೆಗ್ಗಳಿಕೆಗೆ ಮಸಿ ಬಳಿಯದಿರಲಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯನ್ನು ಬೆನ್ನಟ್ಟಿ ವಿಡಿಯೋ ಚಿತ್ರೀಕರಣ: ಪತ್ರಕರ್ತನ ವರ್ತನೆಗೆ ವ್ಯಾಪಕ ಆಕ್ರೋಶ

ಧಾರ್ಮಿಕ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವ ಯಾವುದೇ ವ್ಯಕ್ತಿಯೂ ( ಪಕ್ಷಾತೀತವಾಗಿ) ಮೊದಲು ನಮ್ಮ ದೇಶದ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಲಿ. ಆಗಲಾದರೂ ಇವರಲ್ಲಿ ಒಂದಷ್ಟು ಮೌಲಿಕ ತಿಳುವಳಿಕೆ ಹುಟ್ಟಬಹುದು ಎಂದು ಕಾಣುತ್ತದೆ.

ಮೊದಲು ಮಾನವೀಯತೆ ಕಲಿಯಬೇಕಾದ್ದು ಎಲ್ಲಾ ಧರ್ಮೀಯರ ಸಂವಿಧಾನಿಕ ಜವಾಬ್ದಾರಿ. ಹಿಜಾಬ್ ನೆಪದಲ್ಲಿ ನಡೆಯುತ್ತಿರುವ ಇಂತಹ ಕ್ರೂರ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ.

ಹೀಗೆ ಅಟ್ಟಿಸಿಕೊಂಡು ಹೋಗಲು ಶಿಕ್ಷಣ ಪಡೆಯುವ ಮಕ್ಕಳೇನು, ಭಯೋತ್ಪಾದಕರೇ ಇಲ್ಲ ತೀವ್ರವಾದಿಗಳೇ? ಸಮಾಜವು ನೈತಿಕವಾಗಿ ಕುಸಿದು ನಾಶವಾಗುವ ಮುನ್ನ ಇಂತಹ ಮೂರ್ಖತನವನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕಾಗಿದೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News