ಚಿಕ್ಕಮಗಳೂರು: ಎರಡು ಖಾಸಗಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ನಿರ್ಬಂಧ

Update: 2022-02-16 06:53 GMT

ಚಿಕ್ಕಮಗಳೂರು, ಫೆ.16: ನಗರದ ಎರಡು ಖಾಸಗಿ ಪಿಯು ಕಾಲೇಜುಗಳಲ್ಲಿ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ನಗರದ ರಾಮನಹಳ್ಳಿಯಲ್ಲಿರುವ ಮೌಂಟೆನ್ ವೀವ್ ಕಾಲೇಜು ಹಾಗೂ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಬುಧವಾರ ಬೆಳಗ್ಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಗೇಟಿನ ಎದುರೇ ತಡೆದು ನಿಲ್ಲಿಸಿದ್ದಾರೆ.

ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ, ಹಿಜಾಬ್ ತೆಗೆದೇ ಕಾಲೇಜು ಆವರಣ ಪ್ರವೇಶಿಸುವಂತೆ ಪ್ರಾಂಶುಪಾಲರು, ಶಿಕ್ಷಕರು ಸೂಚಿಸಿದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಅದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಮಲೆನಾಡು ವಿದ್ಯಾಸಂಸ್ಥೆ ಎದುರು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಆದರೆ ಕಾಲೇಜು ಸಿಬ್ಬಂದಿ ಹಿಜಾಬ್ ತೆಗೆಯದ ಹೊರತು ಕಾಲೇಜು ತರಗತಿಗೆ ಹಾಜರಾಗಲು ಬಿಡದ ಪರಿಣಾಮ ಕಾಲೇಜು ಗೇಟು ಬಳಿ ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕಿಳಿದರು. ಬಳಿಕ ನ್ಯಾಯ ಬೇಕು ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿನಿಯರು ಗೇಟ್ ತೆಗೆದು ಕಾಲೇಜು ಆವರಣದಲ್ಲಿ ಧರಣಿ ನಡೆಸುತ್ತಿದ್ದಾರೆ.

ಇನ್ನು ಮೌಂಟೆನ್ ವೀವ್ ಕಾಲೇಜಿನಲ್ಲೂ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು ಕೂಡಾ ಸ್ಥಳಕ್ಕೆ ಆಗಮಿಸಿದ್ದು, ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಪರಿಸ್ತಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News