ಕೊಪ್ಪ: ಸರಕಾರಿ ಪದವಿ ಕಾಲೇಜಿನಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ನಿರ್ಬಂಧ

Update: 2022-02-16 08:22 GMT

ಚಿಕ್ಕಮಗಳೂರು, ಫೆ.16: ಕೊಪ್ಪ ಸರಕಾರಿ ಪದವಿ ಕಾಲೇಜಿನಲ್ಲೂ‌ ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರ್ಬಂಧಿಸಿರುವ ಘಟನೆ ಇಂದು ನಡೆದಿದೆ.

 ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಜೆ ಘೋಷಿಸಲ್ಪಟ್ಟಿದ್ದ ಪದವಿ ಕಾಲೇಜುಗಳು ಇಂದು ಪುನಾರಂಭಗೊಂಡಿದೆ. ಅದರಂತೆ ಇಂದು ಪಟ್ಟದ ಸರಕಾರಿ ಪದವಿ ಕಾಲೇಜಿಗೆ ಎಂದಿನಂತೆ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಲು ಅವಕಾಶ ನಿರಾಕರಿಸಲಾಗಿದೆ.  

ಹಿಜಾಬ್ ತೆಗೆಯುವಂತೆ ಪ್ರಾಂಶಪಾಲರು ಮನವಿ ಮಾಡಿದ್ದು, ಅದಕ್ಕೆ ಒಪ್ಪದೆ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿಯೇ ಪಾಠ ಕೇಳುತ್ತೆವೆಂದು ಪಟ್ಟು ಹಿಡಿದಿದ್ದಾರೆ. ಆದರೆ ಕಾಲೇಜು ಪ್ರಾಂಶುಪಾಲರು ಹಿಜಾಬ್ ತೆಗೆಯದ ಹೊರತು ಕಾಲೇಜು ಪ್ರವೇಶಕ್ಕೆ ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿದ್ದಾರೆ.

ಇದರಿಂದ ಕೆಲ ಮಕ್ಕಳು ಕಾಲೇಜಿಗೆ ತೆರಳದೆ ಮನೆಗೆ ಹಿಂದಿರುಗಿದ್ದಾರೆ. ಮತ್ತೆ ಕೆಲವರು ಕಾಲೇಜಿನ ಎದುರೇ ಕಾಯುತ್ತಿದ್ದಾರೆ.

 ಪದವಿ ಕಾಲೇಜಿಗೆ ವಸ್ತ್ರ ಸಂಹಿತೆ ಇಲ್ಲದಿದ್ದರೂ ಹಿಜಾಬ್ ಗೆ ನಿರ್ಬಂಧ: ಸಾರ್ವಜನಿಕರ ಆಕ್ರೋಶ

ಸರಕಾರಿ ಪದವಿ ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಯಾವ ಉಡುಪು ಬೇಕಾದರೂ ಧರಿಸಿ ಕಾಲೇಜಿಗೆ ಬರಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಂಗಳವಾರ ಸ್ಪಷ್ಟಪಡಿಸಿದ್ದರು. ಈ ರೀತಿ ಪದವಿ ಕಾಲೇಜಿಗೆ ವಸ್ತ್ರ ಸಂಹಿತೆ ಇಲ್ಲ ಎಂದು ಸರಕಾರವೇ ಆದೇಶಿಸಿದ್ದರೂ ಕೊಪ್ಪ ಪದವಿ ಕಾಲೇಜಿನ ಪ್ರಾಂಶುಪಾಲರ ಉದ್ಧಟತನ ವರ್ತನೆ ತೋರಿದ್ದಾರೆ ಎಂದು ವಿದ್ಯಾರ್ಥಿನಿಯರ ಪೋಷಕರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಭ್ರದ್ರತೆ ನಿಯೋಜಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News