ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಶಬ್ದ ಮಾಲಿನ್ಯ ಸಂಬಂಧ ನೋಟಿಸ್ ಹಿಂಪಡೆಯಲಾಗಿದೆ: ಆರಗ ಜ್ಞಾನೇಂದ್ರ
ಬೆಂಗಳೂರು, ಫೆ.16: 'ದೇವಸ್ಥಾನಗಳಲ್ಲಿ ಪೂಜಾ ವಿಧಿಗಳಲ್ಲಿ ಒಂದಾದ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ' ಎಂಬ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆಯು ತನ್ನ ಆದೇಶವನ್ನು ಹಿಂಪಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದ್ದಾರೆ.
ಬುಧವಾರ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯರಾದ ಸಿ.ಟಿ.ರವಿ ಮತ್ತು ರವಿಸುಬ್ರಹ್ಮಣ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, 'ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ' ಎಂದರು.
'ಯಾವ ಧಾರ್ಮಿಕ ಕೇಂದ್ರಗಳಲ್ಲಿ ಮುಂಜಾನೆ ಈ ರೀತಿಯ ಶಬ್ದ ಉಂಟಾಗುತ್ತಿತ್ತೋ ಅಂತಹ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ನೋಟಿಸ್ ನೀಡಲಾಗಿದೆ. ಇದು ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಇದರಿಂದ ಕೆಲವು ಗೊಂದಲ ಉಂಟಾಗಿದ್ದರಿಂದ ಈಗ ಆದೇಶವನ್ನು ಹಿಂಪಡೆಯಲಾಗಿದೆ ಎಂದರು.
ಆರಂಭಕ್ಕೆ ಸದಸ್ಯ ಸಿ.ಟಿ.ರವಿ ಮಾತನಾಡಿ, 'ಸಾವಿರಾರು ವರ್ಷಗಳಿಂದ ದೇವಸ್ಥಾನ ಮತ್ತು ಮನೆಗಳಲ್ಲಿ ಪೂಜೆ, ಪುನಸ್ಕಾರ ಮಾಡುವಾಗ ಶಂಖ ಊದುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾವಿರಾರು ವರ್ಷಗಳಿಂದಲೂ ಈ ಬಗ್ಗೆ ಯಾರೂ ಕೂಡ ತಕರಾರು ತೆಗೆದಿರಲಿಲ್ಲ. ಈಗ ಏಕಾಏಕಿ ಆಕ್ಷೇಪ ಇದೆ. ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ' ಎಂದು ಪ್ರಶ್ನಿಸಿದ್ದರು.
ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‍ನ ಶಿವಲಿಂಗೇಗೌಡ, ರಾಜ್ಯದಲ್ಲಿ ಬಿಜೆಪಿಯದ್ದೇ ಸರಕಾರ ಅಧಿಕಾರದಲ್ಲಿ ನಿಮ್ಮ ವಿರುದ್ದ ಯಾರೂ ಷಡ್ಯಂತ್ರ ಮಾಡುತ್ತಾರೆ ಎಂದು ಪ್ರಶ್ನಿಸಿದರು.