ಹಿಜಾಬ್ ಗೆ ನಿರ್ಬಂಧ: 'ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮಧ್ಯಪ್ರವೇಶಿಸಿ' ಎಂದು ಕೋರಿ ರಾಷ್ಟ್ರಪತಿಗೆ ಪಿಯುಸಿಎಲ್ ಪತ್ರ

Update: 2022-02-17 17:22 GMT

ಬೆಂಗಳೂರು, ಫೆ. 17: ‘ರಾಜ್ಯ ಸರಕಾರ ಶಾಲೆ-ಕಾಲೇಜುಗಳಲ್ಲಿ ‘ಹಿಜಾಬ್' ಧರಿಸಲು ನಿರ್ಬಂಧ ಹೇರುವ ಮೂಲಕ ಸಂವಿಧಾನ ನೀಡಿರುವ ನಾಗರಿಕ ಹಕ್ಕನ್ನು ಉಲ್ಲಂಘಿಸುತ್ತಿದೆ. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸಿ ಜನರ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗೆ ನೆರವಾಗಬೇಕು' ಎಂದು ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್(ಪಿಯುಸಿಎಲ್) ಪತ್ರ ಬರೆದಿದೆ.

ಗುರುವಾರ ಪಿಯುಸಿಎಲ್ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ.ರಾಜೇಂದ್ರ ವೈ.ಜೆ., ಪಿಯುಸಿಎಲ್‍ನ ಕರ್ನಾಟಕದ ಅಧ್ಯಕ್ಷ ಹಾಗೂ ವಕೀಲ ಅರವಿಂದ್ ನಾರಾಯಣ್, ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದು, ‘ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ರಾಜ್ಯದಲ್ಲಿ ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಲೇ ಇವೆ. ಮತೀಯ ಗೂಂಡಾಗಿರಿ, ದ್ವೇಷದ ಅಪರಾಧಗಳು, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಇದೀಗ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಹಿಜಾಬ್ ನಿರ್ಬಂಧ ಹೇರಿದೆ' ಎಂದು ಉಲ್ಲೇಖಿಸಿದ್ದಾರೆ.

‘ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಮತೀಯ ಗೂಂಡಾಗಿರಿಯ ಬಗೆಗೆ ಯಾವ ಕ್ರಮಗಳನ್ನು ಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ‘ಕ್ರಿಯೆಗೆ ಪ್ರತಿಕ್ರಿಯೆ' ಎಂಬ ಹೇಳಿಕೆ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಅವರಿಗಿರುವ ತಿರಸ್ಕಾರದ ಸೂಚನೆಯಾಗಿದೆ. ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಾಮಾಜಿಕ ಐಕ್ಯತೆ ಕಾಪಾಡುವುದರ ಜೊತೆಗೆ ಎಲ್ಲರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

‘ರಾಜ್ಯ ಸರಕಾರ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಹೇರಿರುವುದು ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆ. ಈ ಮಧ್ಯೆ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿದ ಕೆಲ ಮತೀಯ ಗೂಂಡಾಗಳು ಕಾಲೇಜಿಗೆ ತೆರಳುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಬೆದರಿಸಿ, ಹಿಂಸಿಸುವ ಘಟನೆಗಳು ನಡೆದಿವೆ. ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳನ್ನೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಹಕ್ಕನ್ನು ಚಲಾಯಿಸದಂತೆ ತಡೆಹಿಡಿದರೂ, ಸರಕಾರ ಮೂಕ ಪ್ರೇಕ್ಷಕನಾಗಿಯೇ ಉಳಿಯಿತು' ಎಂದು ಅವರುಗಳು, ರಾಷ್ಟ್ರಪತಿಗಳ ಗಮನ ಸೆಳೆದಿದ್ದಾರೆ.

‘ಸರಕಾರದ ಅಧಿಸೂಚನೆ ಸಮವಸ್ತ್ರದ ಅಗತ್ಯತೆಯ ಬಗ್ಗೆ ಯಾವ ಕಾಳಜಿಯನ್ನೂ ಹೊಂದಿಲ್ಲ. ಮಾತ್ರವಲ್ಲ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಮತ್ತು ಗೂಂಡಾಗಿರಿಯಲ್ಲಿ ತೊಡಗಿರುವ ಗುಂಪುಗಳಿಗೆ, ಸರಕಾರಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ರಕ್ಷಿಸುವ ಸಾಂವಿಧಾನಿಕ ಹೊಣೆಗಾರಿಕೆಯಿದೆ ಎಂಬುದನ್ನು ನಂಬಿಲ್ಲ. ಮಾತ್ರವಲ್ಲ ಮುಸ್ಲಿಂ ಹೆಣ್ಣುಮಕ್ಕಳನ್ನು ಕಾಲೇಜುಗಳಿಂದ ತಡೆಹಿಡಿದು, ಅವಮಾನಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

‘ಮಂಡ್ಯದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಮುಸ್ಕಾನ್ ಎಂಬ ಬಿ.ಕಾಂ ವಿದ್ಯಾರ್ಥಿನಿಯನ್ನು ಕೇಸರಿ ಶಾಲು ಧರಿಸಿದ್ದ ಪುಂಡರ ಗುಂಪು ತಡೆಯಲು ಯತ್ನಿಸಿದ ವಿಡಿಯೋ ಜಗತ್ತಿನ ಎಲ್ಲೆಡೆ ಹರಿದಾಡಿದ್ದು, ಆಕೆಯ ಧೈರ್ಯವನ್ನು ಎಲ್ಲರೂ ಮೆಚ್ಚಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಿದರೂ ಸರಕಾರ ಕ್ರಮ ವಹಿಸುತ್ತಿಲ್ಲ. ಹೀಗಾಗಿ ಮಧ್ಯಪ್ರವೇಶಿಸಿ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ನೆರವಾಗಬೇಕು' ಎಂದು ಪಿಯುಸಿಎಲ್, ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News