ಈಶ್ವರಪ್ಪ ತಾನು ದೇಶದ್ರೋಹಿ ಎಂದು ಒಪ್ಪಿಕೊಂಡಿದ್ದಾರೆ: ಡಿ.ಕೆ.ಶಿವಕುಮಾರ್

Update: 2022-02-17 16:17 GMT

ಬೆಂಗಳೂರು, ಫೆ.17: '' ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸಲು ಬಯಸಿದ್ದು, ಇದು ದೇಶದ ಕಾನೂನಿಗೆ ವಿರುದ್ಧವಾಗಿದೆ. ಅವರು ಸಂವಿಧಾನ ಬದಲಿಸಲು, ರಾಷ್ಟ್ರಧ್ವಜ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದೇ ನಮ್ಮ ಆಗ್ರಹ. ಹೀಗಾಗಿ ನಾವು ಅಹೋರಾತ್ರಿ ವಿಧಾನಸಭೆಯಲ್ಲಿ ಧರಣಿ ಮಾಡುತ್ತೇವೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಭಾಗದಲ್ಲಿ ರೈತರ ಧ್ವಜ ಹಾರಿಸಲು ಮುಂದಾದಾಗ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಿಲ್ಲವೇ? ಅದೇ ರೀತಿ ಈಶ್ವರಪ್ಪ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದರು.

ನಾವು ಕೇಸರಿ ಧ್ವಜ ಹಾರಿಸುತ್ತೇವೆ, ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರೇ ಹೇಳಿದ್ದಾರೆ. ಅವರ ಹೇಳಿಕೆಯನ್ನು ಇಡೀ ಬಿಜೆಪಿ ಪಕ್ಷ ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಕೇವಲ ಈಶ್ವರಪ್ಪ ಮಾತ್ರ ಆರೋಪಿಯಲ್ಲ. ಇಡೀ ಬಿಜೆಪಿ ಪಕ್ಷವೇ ಇದರಲ್ಲಿ ಭಾಗಿಯಾಗಿದೆ. ಈಶ್ವರಪ್ಪನ ಹರಕುಬಾಯಿಯಿಂದ ಬಿಜೆಪಿ ಪಕ್ಷಕ್ಕೆ, ರಾಜ್ಯಕ್ಕೆ ಹಾಗೂ ದೇಶದ ಘನತೆಗೆ ಧಕ್ಕೆಯಾಗುತ್ತಿದ್ದು, ಆತನ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎಂದು ಭಾವಿಸಿದ್ದೆ ಎಂದು ಅವರು ತಿಳಿಸಿದರು.

ಆದರೆ, ಬಿಜೆಪಿ ನಾಯಕರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯುತ್ತಿಲ್ಲ, ರಾಜ್ಯಪಾಲರು ವಜಾ ಮಾಡುತ್ತಿಲ್ಲ, ಇನ್ನು ಅಧಿಕಾರಿಗಳು ಬಿಜೆಪಿ ಜತೆ ಶಾಮೀಲಾಗಿದ್ದಾರೆ. ಪೊಲೀಸ್ ಮಹಾನಿರ್ದೇಶಕರು ಇದುವರೆಗೂ ಯಾಕೆ ಪ್ರಕರಣ ದಾಖಲಿಸಿಲ್ಲ? ಅವರ ಹೊಣೆಗಾರಿಕೆ ಕೂಡ ಇದರಲ್ಲಿ ಇದೆ ಎಂದು ಶಿವಕುಮಾರ್ ದೂರಿದರು.

''ನಾನು ಶಾಸನಸಭೆಯಲ್ಲಿ ಯಾರಿಗೂ ನೀನು ಎಂದಿಲ್ಲ. ಆದರೆ ಅವರು ನಮ್ಮ ತಂದೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪೂರ್ವಿಕರು ಗಾಂಧಿ ತತ್ವ ಅನುಸರಿಸುತ್ತಿದ್ದರು. ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಎಲ್ಲವನ್ನು ಕೊಟ್ಟಿರುವವರು ನಾವು. ಮಹಾತ್ಮಾ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಾ ಈ ದೇಶವನ್ನು ಅಭಿವೃದ್ಧಿಶೀಲ ಮಾಡಲು ಅಡಿಪಾಯ ಹಾಕಿದ್ದೇವೆ. ರಾಷ್ಟ್ರಧ್ವಜ ರಕ್ಷಣೆ ಹೇಗೆ ಮಾಡಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ''ಎಂದು ಅವರು ತಿಳಿಸಿದರು.

ಈ ಬಂಡೆಗೆ ಡೈನಮೇಟ್ ಇಟ್ಟಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆ ಚಪ್ಪಡಿ ಕಲ್ಲಾಗಬಹುದು, ಜಲ್ಲಿ ಆಗಬಹುದು, ವಿಗ್ರಹ ಆಗಬಹುದು. ಬಂಡೆಯಿಂದ ಆದ ವಿಗ್ರಹವನ್ನೇ ಎಲ್ಲರೂ ಪೂಜಿಸುತ್ತಿದ್ದಾರೆ. ಹೀಗಾಗಿ ನನ್ನನ್ನು ಬಂಡೆ ಎಂದು ಕರೆದರೆ ಬಹಳ ಸಂತೋಷ. ನನ್ನನ್ನು ಮತ್ತೆ ಜೈಲಿಗೆ ಹಾಕಿಸಲು ಅಧಿಕಾರಿಗಳಿಗೆ ಏನೆಲ್ಲಾ ಸೂಚನೆ ಕೊಡುತ್ತಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಬಿಜೆಪಿಯವರ ಜತೆ ಬೇರೆ ಪಕ್ಷದವರೂ ಸೇರಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ತ್ರಿವರ್ಣ ಧ್ವಜ ಬಳಸಿ ಅಪಮಾನ ಮಾಡಿದೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಶಿವಕುಮಾರ್, ಬಿಜೆಪಿ ಅವರು ತಿರಂಗಾ ಯಾತ್ರೆ ಮಾಡಿಲ್ಲವೇ? ಕಲ್ಯಾಣ್ ಸಿಂಗ್ ಸತ್ತಾಗ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಪಕ್ಷದ ಧ್ವಜ ಹಾಕಲಿಲ್ಲವೇ? ಯೋಗಿ ಆದಿತ್ಯನಾಥ್ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜ ಹಾರಿಸಿದರಲ್ಲಾ ಇವೆಲ್ಲಾ ಏನು? ನಾವು ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟು ಹೋರಾಟದ ಭಾಗವಾಗಿ ಬಳಸಿದ್ದೇವೆ ಎಂದರು. 

ಹಿಜಾಬ್ ವಿಚಾರದಲ್ಲಿ ಹಿನ್ನಡೆಯಾಗಿದೆ, ಹೀಗಾಗಿ ರಾಷ್ಟ್ರಧ್ವಜ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ, 'ಬಿಜೆಪಿ ಅವರು ಎಲ್ಲಾ ಚುನಾವಣೆಗಳಲ್ಲಿ ಸೋಲುತ್ತಿದ್ದಾರೆ. ನಾರಾಯಣ ಗುರುಗಳ ವಿಚಾರದಲ್ಲಿ ಹಿನ್ನಡೆ ಆಗಿದೆ. ಈ ಎಲ್ಲ ಕಾರಣಕ್ಕೆ ಅವರು ಭಾವನಾತ್ಮಕ ವಿಚಾರ ಎಳೆದು ತರುತ್ತಿದ್ದಾರೆ' ಎಂದು ಅವರು ತಿರುಗೇಟು ನೀಡಿದರು.

ಆ ವಿಚಾರ ನ್ಯಾಯಾಲಯದಲ್ಲಿದೆ. ಸರಕಾರ ಸುತ್ತೋಲೆ ಹೊರಡಿಸಿದ್ದು, ಅದರ ಆಧಾರದ ಮೇಲೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅವರವರ ಸಂಸ್ಕೃತಿ, ಧರ್ಮ, ಪೋಷಕರ ವಿಚಾರ ಅವರು ನೋಡಿಕೊಳ್ಳುತ್ತಾರೆ. ನಾವು ರಾಜಕೀಯ ಪಕ್ಷವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಪ್ರಶ್ನಿಸುತ್ತೇವೆ ಎಂದು ಅವರು ಹೇಳಿದರು.

ಇಷ್ಟು ದಿನ ಯಾರಾದರೂ ಕೇಸರಿ ಧ್ವಜ ಹಾಕುತ್ತಿದ್ದರಾ? ನಾವು ಧಾರ್ಮಿಕ ಚಟುವಟಿಕೆ ಸಮಯದಲ್ಲಿ ಹಾಕುತ್ತೇವೆ. ಹಾಗಂತ ಶಾಲೆಗೆ ಹಾಕಿಕೊಂಡು ಹೋಗಿದ್ದೇವಾ? ಅವರಲ್ಲಿ ಕೆಲವರು ಮೊದಲಿಂದಲೂ ಹಿಜಾಬ್ ಹಾಕಿಕೊಂಡೇ ಬರುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ. ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಕೂಡ ಹಾಗೆ ಹಾಕಿಕೊಳ್ಳುತ್ತಿದ್ದರು. ಅದೇ ರೀತಿ ಆ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿಕೊಂಡಿದ್ದಾರೆ ಎಂದು ಶಿವಕುಮಾರ್ ಉತ್ತರಿಸಿದರು.

ಕೋರ್ಟ್ ಮಧ್ಯಂತರ ಆದೇಶದ ನಂತರ ಮತ್ತೆ ಹಿಜಾಬ್ ಹಾಕುತ್ತಿರುವ ಬಗ್ಗೆ ಈಶ್ವರಪ್ಪ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ, 'ಹರಕುಬಾಯಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆತ ಮೊದಲು ಸಚಿವ ಸ್ಥಾನದಿಂದ ಕೆಳಗೆ ಇಳಿಯಬೇಕು. ನಮ್ಮಪ್ಪನ ಬಗ್ಗೆ ಅವರು ಮಾತನಾಡಿದ್ದಾರೆ. ಬೇಕಾದರೆ ನಮ್ಮಪ್ಪನನ್ನು ಭೇಟಿ ಮಾಡಲಿ. ಈ ವಿಚಾರವಾಗಿ ಸಮಯ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News