ರಾಗಿ ಬೆಳೆಗಾರರ ಸಂಕಷ್ಟಕ್ಕೆ ಗಮನ ಹರಿಸುವಂತೆ ಮಾಜಿ ಪ್ರಧಾನಿ ದೇವೇಗೌಡ ಮನವಿ

Update: 2022-02-17 17:25 GMT

ಬೆಂಗಳೂರು, ಫೆ.17: ರಾಗಿ ಬೆಳೆಗಾರರ ಸಂಕಷ್ಟಕ್ಕೆ ಸರಕಾರ ತಕ್ಷಣ ಗಮನ ಹರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸುತ್ತೇನೆ. ನಮ್ಮ ಮಾತಿಗೆ ಬೆಲೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಗುರುವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ವೈಎಸ್‍ವಿ ದತ್ತ ಈಗಾಗಲೆ ರಾಗಿ ವಿಚಾರವನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ರಾಗಿ ಖರೀದಿ ಮಾಡುವಾಗ ಸಣ್ಣ, ದೊಡ್ಡ ರೈತ ಎಂದು ಭೇದ ಬೇಡ ಎಂದು ತಿಳಿಸಿದ್ದಾರೆ. ನನ್ನದೂ ಅದೇ ಅಭಿಪ್ರಾಯ ಎಂದರು.

ಕೇಂದ್ರ ಸರಕಾರವು ರಾಗಿ ಬೆಳೆಗೆ ಈ ಬಾರಿ 3,377 ರೂ.ಗಳನ್ನು ಬೆಂಬಲ ಬೆಲೆ(ಎಂ.ಎಸ್.ಪಿ)ಯಾಗಿ ಘೋಷಣೆ ಮಾಡಿದೆ. ಕಳೆದ ಬಾರಿ ಎಂ.ಎಸ್.ಪಿ. 3,295 ರೂ.ಇತ್ತು. ಈ ಬಾರಿ ನೆಪ ಮಾತ್ರಕ್ಕೆ ಕೇವಲ 52 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಯಾವ ಆಧಾರದಲ್ಲಿ 52 ರೂ.ಗಳನ್ನು ಹೆಚ್ಚಳ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು.

ರೈತರ ಪರವಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ. ನಾವೆಲ್ಲ ರೈತ ಕುಟುಂಬದವರೇ. ಹಾಗಾಗಿ ಅವರಿಗೆ ಅನ್ಯಾಯವಾದಾಗ ನಾನು ಅವರ ಪರವಾಗಿ ನಿಲ್ಲುತ್ತೇನೆ. ಪ್ರತಿ ಕ್ವಿಂಟಾಲ್ ರಾಗಿಗೆ ಕನಿಷ್ಠ 4 ಸಾವಿರ ರೂಪಾಯಿಯನ್ನಾದರೂ ಕೊಡಬೇಕು. 52 ರೂ.ಗಳನ್ನು ಹೆಚ್ಚಳ ಮಾಡುವ ಮೂಲಕ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಫೆ.20ರಂದು ಹೊಸದಿಲ್ಲಿಗೆ ಹೋಗುತ್ತೇನೆ. ಈಗ ಇತರ ರಾಜ್ಯಗಳ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ ಪ್ರಧಾನಮಂತ್ರಿ ಅವರನ್ನ ಭೇಟಿಗೆ ಸಮಯ ಕೇಳುತ್ತೇನೆ. ಭೇಟಿಗೆ ಅವಕಾಶ ಸಿಕ್ಕರೆ ಎಲ್ಲ ವಿಷಯವನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.

ಇದೇ ವೇಳೆ ಸದನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡವರು ಏನೋ ಹೇಳುತ್ತಾರೆ ಅಂದರೆ ಗೌರವ ಇರೋದು. ಆಗ ನಾನು ಯಾವತ್ತು ಸದನದ ಬಾವಿಯೊಳಗೆ ಹೋಗಲೇ ಇಲ್ಲ, ವಿರೋಧ ಪಕ್ಷದ ನಾಯಕನಾಗಿ ಸರಕಾರಕ್ಕೆ ನಾನು ಅಭಿಪ್ರಾಯ ಹೇಳುತ್ತಿದ್ದೆ, ಸಲಹೆಗಳನ್ನು ನೀಡುತ್ತಿದ್ದೆ ಎಂದರು.

ನಾನು ಸದನದಲ್ಲಿ ಅಶ್ಲೀಲ ಪದವನ್ನು ಒಂದು ದಿನವೂ ಮಾತಾಡಿಲ್ಲ. ಇವತ್ತು ಅಶ್ಲೀಲ ಪದಗಳ ಬಳಕೆಯಿಂದಾಗಿ ಸದನ ತೀರಾ ತಳಮಟ್ಟಕ್ಕೆ ಹೋಗುತ್ತಿದೆ. ಸದನದಲ್ಲಿ ನಾವು ಆಗ ಎಂತಹವರನ್ನೆಲ್ಲ ನೋಡಿದ್ದೇವೆ. ಆದರೆ, ಇತ್ತೀಚೆಗೆ ಸದನದಲ್ಲಿ ಏನೆಲ್ಲ ಆಗುತ್ತಿದೆ ಅನ್ನೋದನ್ನು ನೋಡುತ್ತಿದ್ದೇನೆ ಎಂದು ದೇವೇಗೌಡ ಹೇಳಿದರು.

ಹಿಜಾಬ್ ವಿಚಾರವನ್ನು ಪ್ರಾರಂಭದಲ್ಲೆ ಚಿವುಟಿ ಹಾಕಬೇಕಿತ್ತು. ಆಡಳಿತ ಪಕ್ಷವೇ ಈ ಕೆಲಸ ಮಾಡಬೇಕಿತ್ತು. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯ ಆದೇಶಕ್ಕೂ ಬಗ್ಗುವುದಿಲ್ಲ ಎಂದು ಹೆಣ್ಣು ಮಕ್ಕಳು ಹೇಳಿಕೆ ನೀಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಷ್ಟವಾಗುತ್ತದೆ. ಗಾಂಧೀಜಿ ಸ್ವಾತಂತ್ರ್ಯ ತಂದು ಕೊಟ್ಟರು, ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಕೊಟ್ಟರು. ಈಗ ಏನಾಗುತ್ತಿದೆ? ಎಂದು ಅವರು ಕಳವಳ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News