×
Ad

ನೆಲವಾಗಿಲು ಗ್ರಾಮ ಸ್ಥಳಾಂತರ ವಿಚಾರ: ಹಂಚಿಕೆಯಾಗಿದ್ದ ಮನೆಗಳ ಮಾರಾಟ; ಸರಕಾರದಿಂದ ಹೈಕೋರ್ಟ್ ಗೆ ಮಾಹಿತಿ

Update: 2022-02-17 23:11 IST

ಬೆಂಗಳೂರು, ಫೆ.17: ಹಾವೇರಿ ಜಿಲ್ಲೆಯ ನೆಲವಾಗಿಲು ಗ್ರಾಮವನ್ನು ಅದೇ ಜಿಲ್ಲೆಯ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಫಲಾನುಭವಿಗಳೇ ಅಡ್ಡಿಪಡಿಸುತ್ತಿದ್ದಾರೆ ಹಾಗೂ ತಮಗೆ ಮಂಜೂರಾಗಿದ್ದ ಮನೆ, ನಿವೇಶನಗಳನ್ನು ಕೆಲ ಫಲಾನುಭವಿಗಳು ಮಾರಾಟ ಮಾಡಿದ್ದಾರೆ  ಎಂದು ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ನೆಲವಾಗಿಲು ಗ್ರಾಮದಲ್ಲಿ ನೀರು ಮತ್ತು ಗಾಳಿ ಮಾಲಿನ್ಯವಾಗಿರುವ ಹಿನ್ನೆಲೆ ಅಲ್ಲಿನ ಗ್ರಾಮಸ್ಥರನ್ನು ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸಲು ಸರಕಾರಕ್ಕೆ ಆದೇಶಿಸಬೇಕು ಎಂದು ರೇಣುಕಾ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸರಕಾರದ ಪರ ವಾದಿಸಿದ ವಕೀಲರು, ನೆಲವಾಗಿಲು ಗ್ರಾಮದ ನಿವಾಸಿಗಳಿಗೆ ಕೊಡಿಯಾಲ ಗ್ರಾಮದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದರೂ ಅಲ್ಲಿಗೆ ಹೋಗುತ್ತಿಲ್ಲ. ಹೋಗಲು ಹಲವು ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಕೆಲ ಫಲಾನುಭವಿಗಳು ತಮಗೆ ನೀಡಿದ ಮನೆ, ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.  

ಸರಕಾರಿ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಸರಕಾರ ಈ ಕುರಿತಂತೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರಕಾರದ ವಸ್ತುಸ್ಥಿತಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಮುಂದೂಡಿತು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News