ರಾಯಚೂರಿನಿಂದ ನ್ಯಾ.ಮಲ್ಲಿಕಾರ್ಜುನಗೌಡ ಬೆಂಗಳೂರಿಗೆ ವರ್ಗಾವಣೆ

Update: 2022-02-18 12:29 GMT
ನ್ಯಾ. ಮಲ್ಲಿಕಾರ್ಜುನಗೌಡ

ಬೆಂಗಳೂರು, ಫೆ.18: ಗಣರಾಜ್ಯೋತ್ಸವ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ಎದುರಿಸುತ್ತಿದ್ದ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಹೈಕೋರ್ಟ್ ವರ್ಗಾವಣೆ ಮಾಡಿ ಆದೇಶಿಸಿದೆ.

ಹೈಕೋರ್ಟ್ ಆದೇಶದ ಮೇರೆಗೆ ವರ್ಗಾವಣೆ ಮಾಡಿ ರಿಜಿಸ್ಟ್ರಾರ್ ಜನರಲ್ ಶಿವಶಂಕರೇಗೌಡ ಅವರು ಶುಕ್ರವಾರ ನೋಟಿಫಿಕೇಷನ್ ಹೊರಡಿಸಿದ್ದಾರೆ.

ನೋಟಿಫಿಕೇಷನ್‍ನಲ್ಲಿ ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರನ್ನು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರಾಗಿ ವರ್ಗಾವಣೆ ಮಾಡಲಾಗಿದೆ.

ಸದ್ಯ ಈ ಹುದ್ದೆಯಲ್ಲಿ ಇರುವ ಎಸ್.ಹೆಚ್.ರೇಣುಕಾದೇವಿ ಅವರು ಇದೇ ಫೆ.28ರಂದು ಸೇವೆಯಿಂದ ನಿವೃತ್ತಿಯಾಗಲಿರುವ ಕಾರಣ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ಜನವರಿ 26ರಂದು ಗಣರಾಜ್ಯೋತ್ಸವದ ದಿನ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಫೋಟೋ ಜೊತೆಗೆ ಡಾ. ಬಿ.ಆರ್.ಅಂಬೇಡ್ಕರರ ಫೋಟೋ ಕೂಡ ಇರಿಸಲಾಗಿತ್ತು.

ಆದರೆ, ಧ್ವಜಾರೋಹಣಕ್ಕೆ ಮುನ್ನ ಅಂಬೇಡ್ಕರ್ ಫೋಟೋ ತೆರವು ಮಾಡಲಾಗಿತ್ತು. ಇದಕ್ಕೆ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರು ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಘಟನೆ ಸಂಬಂಧ ಹೈಕೋರ್ಟ್ ಕೂಡ ವಸ್ತುಸ್ಥಿತಿ ವರದಿ ಕೇಳಿತ್ತು. 

ರಾಜ್ಯ ಸರಕಾರ, ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ಇದೇ ಫೆ.19ರಂದು ಬೆಂಗಳೂರಿನಲ್ಲಿ ವಿಧಾನಸೌಧ, ಹೈಕೋರ್ಟ್ ಚಲೋ ಹೆಸರಿನಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಇವೆಲ್ಲದರ ನಡುವೆ ಅವರನ್ನೀಗ ಹೈಕೋರ್ಟ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News