ಸಂಘಪರಿವಾರದ ತಾಳಕ್ಕೆ ಕುಣಿದು ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲು ಹೊರಟ ಬಿಜೆಪಿ:ಸಿದ್ದರಾಮಯ್ಯ

Update: 2022-02-18 12:02 GMT

ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆದು, ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ , ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮ್ಯಯ್ಯ ಹೇಳಿದ್ದಾರೆ .

ಸಿದ್ದರಾಮಯ್ಯ ಅವರ ಟ್ವೀಟ್ ಇಂತಿದೆ...

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ನಲ್ಲಿ ಮಧ್ಯಂತರ ತೀರ್ಪು ಬಂದಿದೆ. ಶಾಲಾಭಿವೃದ್ಧಿ ಕಮಿಟಿ ಇರುವ ಕಡೆಗಳಲ್ಲಿ ಸಮಿತಿಯು ಸಮವಸ್ತ್ರ ನೀತಿ ರೂಪಿಸಿದ್ದರೆ ಅಲ್ಲಿ ಮಾತ್ರ ಈ ಆದೇಶ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. '

ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿನ ವಸತಿ ಶಾಲಾ ಕಾಲೇಜುಗಳು, ಮೌಲಾನಾ ಆಜಾದ್ ಮಾದರಿ ಶಾಲೆಗಳು (ಆಂಗ್ಲ ಮಾಧ್ಯಮ) ಶಾಲೆಗಳಿಗೂ ಹೈಕೋರ್ಟ್ ತೀರ್ಪು ಅನ್ವಯವಾಗುತ್ತದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.

ಮೊದಲನೆಯದಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯೇ ಇರುವುದಿಲ್ಲ, ಶಾಲಾಭಿವೃದ್ಧಿ ಸಮಿತಿ ರೂಪಿಸಿದ ಸಮವಸ್ತ್ರ ನೀತಿಗೆ ಮಾತ್ರ ತೀರ್ಪು ಅನ್ವಯವಾಗುತ್ತದೆ. ಹಾಗಾಗಿ ಈ ಸುತ್ತೋಲೆ ಘನ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. 

ಅಲ್ಪಸಂಖ್ಯಾತ ನಿಯೋಗದ ಜೊತೆ ನಾನು, ಡಿ.ಕೆ ಶಿವಕುಮಾರ್ ಅವರು ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಗೊಂದಲ ನಿವಾರಿಸುವಂತೆ ಹೇಳಿದ್ದೇವೆ.ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಕಾಳಜಿ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಬಚಾವೊ, ಭೇಟಿ ಪಡಾವೋ ಎನ್ನುತ್ತಾರೆ. ಬಿಜೆಪಿ ಪಕ್ಷದವರೇ ಸಂಘ ಪರಿವಾರದ ತಾಳಕ್ಕೆ ಕುಣಿಯುತ್ತಾ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡಲು ಹೊರಟಿದ್ದಾರೆ.

ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಬಿಜೆಪಿಯ ನಿಲುವೇನು ಎಂದು ಮೋದಿಯವರೇ ಉತ್ತರಿಸಬೇಕು. ಹಿಜಾಬ್ ವಿವಾದದ ಹಿಂದೆ ಯಾವುದೇ ಸಂಘಟನೆ ಇದ್ದರೂ ಅದನ್ನು ಖಂಡಿಸುತ್ತೇನೆ. ಅದು ಆರೆಸ್ಸೆಸ್ ಇರಲಿ, ಎಸ್.ಡಿ.ಪಿ.ಐ ಇರಲಿ, ಬಜರಂಗ ದಳವಿರಲಿ. ಮೂಲಭೂತವಾದಿ ಸಂಘಟನೆಗಳು ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಗೆ ಮಾರಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News