ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಸದನದಲ್ಲಿ ಪ್ರತಿಪಕ್ಷ ಧರಣಿ: ಸೋಮವಾರಕ್ಕೆ ಕಲಾಪ ಮುಂದೂಡಿದ ಸ್ಪೀಕರ್ ಕಾಗೇರಿ

Update: 2022-02-18 12:47 GMT

ಬೆಂಗಳೂರು, ಫೆ. 18: ‘ದಿಲ್ಲಿ ಕೆಂಪುಕೋಟೆಯ ಮೇಲೆ ಭಗವಾ(ಕೇಸರಿ)ಧ್ವಜವನ್ನು ಒಂದಲ್ಲ ಒಂದು ದಿನ ಹಾರಿಸುತ್ತೇವೆ' ಎಂಬ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಪಟ್ಟುಹಿಡಿದು ಮೂರನೆ ದಿನವೂ ಧರಣಿ ಮುಂದುವರಿಸಿದ್ದರಿಂದ ಉಭಯ ಸದನಗಳ ಕಲಾಪ ಆಹುತಿಯಾಯಿತು.

ಶುಕ್ರವಾರ ಬೆಳಗ್ಗೆ 11ಗಂಟೆಗೆ ನಿಗದಿಯಾಗಿದ್ದ ಕಲಾಪ ಪ್ರತಿಪಕ್ಷಗಳೊಂದಿಗೆ ಸಂದಾನ ಸಭೆ ಹಿನ್ನೆಲೆಯಲ್ಲಿ 11:55ರ ಸುಮಾರಿಗೆ ಸಮಾವೇಶಗೊಂಡಿತು. ಮಾಜಿ ಶಾಸಕ ಜಿ.ವಿ.ಮಂಟೂರು ಅವರಿಗೆ ಸಂತಾಪ, ಪ್ರತಿಪಕ್ಷಗಳ ಗದ್ದಲದ ಮಧ್ಯೆ ಪ್ರಶ್ನೋತ್ತರ ಹಾಗೂ ‘ಕರ್ನಾಟಕ ಸಿವಿಲ್ ಸೇವೆಗಳ(2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ-2122' ಮಂಡಿಸಲಾಯಿತು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನವನ್ನು ಸೋಮವಾರ(ಫೆ.21)ಬೆಳಗ್ಗೆ 11ಗಂಟೆಗೆ ಸೇರುವಂತೆ ಮುಂದೂಡಿದರು.

‘ನಮ್ಮ ಧ್ವಜ ನಮ್ಮ ಹೆಮ್ಮೆ, ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ರಾಷ್ಟ್ರದ್ರೋಹಿ ಈಶ್ವರಪ್ಪರಿಗೆ ಧಿಕ್ಕಾರ, ಬಿಜೆಪಿ ಸರಕಾರಕ್ಕೆ ಧಿಕ್ಕಾರ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ರಾಜೀನಾಮೆ ನೀಡುವವರೆಗೆ ಸದನ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ. ಶನಿವಾರ ಮತ್ತು ರವಿವಾರವೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸಲಿದ್ದೇವೆ' ಎಂದು ಕಾಂಗ್ರೆಸ್ ಸದಸ್ಯರು ಪ್ರಕಟಿಸಿದರು.

ಸದನ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಮುಂದುವರೆಸಿ, ಈಶ್ವರಪ್ಪ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್ ಕಾಗೇರಿ, ಮಾಜಿ ಶಾಸಕ ಜಿ.ವಿ.ಮಂಟೂರ ಅವರಿಗೆ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಬಾವಿಯಲ್ಲೇ ಇದ್ದು ತಮ್ಮ ಧರಣಿ ಮುಂದುವರೆಸಿದರು. ನಂತರ ಸ್ಪೀಕರ್ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಆಗ ಕಾಂಗ್ರೆಸ್ ಸದಸ್ಯರ ಘೋಷಣೆಗಳು ತಾರಕಕ್ಕೇರಿ ಗದ್ದಲದ ವಾತಾವರಣ ರೂಪುಗೊಂಡಿತು. ಗದ್ದಲದ ನಡುವೆಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ನಿಮ್ಮ ರಾಜಕೀಯ ಇಲ್ಲಿ ಬೇಡ: ‘ನಿಮ್ಮ ಕ್ಷೇತ್ರಗಳ ಪ್ರಶ್ನೆಗಳನ್ನು ನೀವೇ ಕೇಳುವುದಿಲ್ಲ ಎಂದರೆ ಹೇಗೆ? ನಿಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಬೇಡವೇ? ಬನ್ನಿ ಪ್ರತಿಪಕ್ಷ ಸದಸ್ಯರು ನಿಮ್ಮ ಪ್ರಶ್ನೆಗಳನ್ನು ಕೇಳಿ, ಸರಕಾರದ ಉತ್ತರ ಪಡೆದುಕೊಳ್ಳಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನ ನಡೆಯದಂತೆ ಅಡ್ಡಿಪಡಿಸುವುದು ಸರಿಯಲ್ಲ. ಧರಣಿ ಕೈಬಿಟ್ಟು ನಿಮ್ಮ ಸ್ಥಾನಗಳಿಗೆ ಬನ್ನಿ. ನಿಮ್ಮದ್ದೇನೆ ರಾಜಕೀಯವಿದ್ದರೂ ಸದನದ ಹೊರಗೆ ಮಾಡಿಕೊಳ್ಳಿ' ಎಂದು ಸ್ಪೀಕರ್ ಹಲವು ಬಾರಿ ಮನವಿ ಮಾಡಿದರೂ, ಪ್ರತಿಪಕ್ಷ ಸದಸ್ಯರು ಇದಕ್ಕೆ ಸೊಪ್ಪು ಹಾಕಲಿಲ್ಲ.

ಏರಿದ ಧ್ವನಿಯಲ್ಲಿ ಕಾಂಗ್ರೆಸ್ ಸದಸ್ಯರ ಘೋಷಣೆ ಗದ್ದಲದ ಮಧ್ಯೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಈ ರೀತಿ ಪ್ರತಿಭಟನೆ ನಡೆಸುವುದು ಒಪ್ಪಲು ಸಾಧ್ಯವಿಲ್ಲ. ಸದನ ಹೀಗೆ ನಡೆಯಬೇಕೆಂಬ ಧೋರಣೆ ಖಂಡನೀಯ. ಕಾಂಗ್ರೆಸ್ ತಂದಿದ್ದ ನಿಲುವಳಿ ಸೂಚನೆಗೆ ಪರ-ವಿರೋಧ ಮಾತುಗಳನ್ನು ಆಲಿಸಿ ಸ್ಪೀಕರ್ ರೂಲಿಂಗ್ ನೀಡಿದ್ದಾರೆ. ಹೀಗಿದ್ದರೂ ರೂಲಿಂಗ್‍ನ್ನು ಒಪ್ಪದೆ ಧರಣಿ ನಡೆಸಿರುವುದು ಈಶ್ವರಪ್ಪರಿಗೆ ಅವಮಾನ ಮಾಡುವುದಲ್ಲ, ಬದಲಿಗೆ ಸ್ಪೀಕರ್ ಪೀಠಕ್ಕೆ ಮಾಡಿದ ಅಪಮಾನ' ಎಂದರು.

‘ಅಧಿವೇಶನ ಕಲಾಪ ಪ್ರಜಾಪ್ರಭುತ್ವದ ದೇಗುಲ. ಜನರ ಸಮಸ್ಯೆಗಳನ್ನು ಇಲ್ಲಿ ಚರ್ಚೆ ಮಾಡಬೇಕೇ ಹೊರತು ರಾಜಕೀಯ ಮಾಡಲಿಕ್ಕೆ ಬಳಕೆ ಮಾಡುವುದಲ್ಲ. ಕಾಂಗ್ರೆಸ್ ಸದಸ್ಯರ ಈ ವರ್ತನೆಯಿಂದ ಜನ ಅಪಹಾಸ್ಯ ಮಾಡುವಂತಹ ವಾತಾವರಣ ರೂಪುಗೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆಗೆ ಕುಂದು ತರುವ ರೀತಿಯಲ್ಲಿ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ. ಸದನದ ಹೊರಗೆ ಇವರ ರಾಜಕೀಯ ಮಾಡಿಕೊಳ್ಳಲಿ' ಎಂದು ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ದ್ವನಿಗೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಂಸದೀಯ ಇತಿಹಾಸದಲ್ಲೇ ಈ ರೀತಿ ನಡೆದಿದ್ದನ್ನು ನಾನು ನೋಡಿಲ್ಲ. ಕಾಂಗ್ರೆಸ್ ಕೈಗೊಂಡಿರುವ ಧರಣಿಯಲ್ಲಿ ಜನರ ಹಿತ ಇಲ್ಲ. ಈ ಹಿಂದೆ ರೈತರು, ಬಡವರ ಪರವಾಗಿ ಧರಣಿ ನಡೆಸಿದ್ದನ್ನು ನೋಡಿದ್ದೇವೆ. ಆದರೆ, ಕಾಂಗ್ರೆಸ್‍ನವರು ಪ್ರತಿಷ್ಠೆ ಮತ್ತು ತಮ್ಮ ರಾಜಕೀಯ ಲಾಭಕ್ಕಾಗಿ ಧರಣಿ ನಡೆದಿದೆ. ಪ್ರತಿಪಕ್ಷ ತನ್ನ ಜವಾಬ್ದಾರಿ ಮರೆತಿದೆ' ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‍ನ ಈ ಜನವಿರೋಧಿ ನಿಲುವಿನಿಂದಾಗಿ ಇಡೀ ದೇಶದಲ್ಲೇ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕಾರ ಮಾಡಿದ್ದಾರೆ. ಈ ಧರಣಿಯಿಂದ ಕಾಂಗ್ರೆಸ್‍ಗೆ ರಾಜಕೀಯವಾಗಿ ಲಾಭವಾಗುವುದಿಲ್ಲ. ಇವರ ರಾಜಕೀಯ ದಿವಾಳಿತನದ ಸಂಕೇತ. ರಾಜ್ಯದಲ್ಲಿ ಶಾಲಾ ಮಕ್ಕಳ ವಿದ್ಯಾರ್ಜನೆಗೆ ಸಂಬಂಧಿಸಿದಂತೆ ಗೊಂದಲಗಳಿವೆ. ನಾವೆಲ್ಲರೂ ಸೇರಿ ಮಕ್ಕಳು ವಿದ್ಯಾರ್ಜನೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಜನತೆ ಸದನದಿಂದ ಗೊಂದಲಗಳಿಗೆ ಪರಿಹಾರ ಸಿಗಬಹುದೆಂದು ಎದುರು ನೋಡುತ್ತಿದ್ದಾರೆ. ನಾವೆಲ್ಲರೂ ಆ ಪ್ರಯತ್ನ ಮಾಡಿ ಒಂದು ಸಂದೇಶ ರವಾನಿಸಬಹುದಾಗಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಈಶ್ವರಪ್ಪ ಅವರು ಮಾಡದಿರುವ ತಪ್ಪಿಗೆ ಕಾಂಗ್ರೆಸ್ ಧರಣಿ ಮಾಡುತ್ತಿದೆ. ಜನತೆ ಇದನ್ನು ಒಪ್ಪುವುದಿಲ್ಲ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇವರಿಗೆ ರಾಜಕಾರಣವೇ ಮುಖ್ಯವಾಗಿದೆ. ಎಲ್ಲವನ್ನು ಬಿಟ್ಟು ಧರಣಿ ನಡೆಸಿ, ಕಲಾಪ ನಡೆಯದಂತೆ ಮಾಡುತ್ತಿರುವುದು ಸಲ್ಲ. ಇದರಿಂದ ಬೇರೆ ಸದಸ್ಯರ ಹಕ್ಕುಗಳು ಮೊಟಕುಗೊಳ್ಳುತ್ತವೆ. ಇವರಿಂದ ರಾಜ್ಯದ ಜನತೆ, ಮಕ್ಕಳಿಗೆ ದ್ರೋಹ ಮಾಡುತ್ತಿದ್ದಾರೆ. ಇದು ಜನವಿರೋಧಿ ಧೋರಣೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಈಶ್ವರಪ್ಪ ಯಾವುದೇ ತಪ್ಪು ಹೇಳಿಕೆಯನ್ನು ನೀಡಿಲ್ಲ. ದಿಲ್ಲಿಯಲ್ಲಿ ಧ್ವಜ ಹಾರಿಸುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಸದಸ್ಯರು ಕ್ಷುಲ್ಲಕ ವಿಚಾರವನ್ನು ಇಟ್ಟುಕೊಂಡು ಧರಣಿಗೆ ಮುಂದಾಗಿದ್ದಾರೆ. ಹೀಗೆ ಮಾಡಿದರೆ ಜನತೆ ಇವರನ್ನು ತಿರಸ್ಕರಿಸಲಿದ್ದಾರೆ. ಧರಣಿ ಕೈಬಿಟ್ಟು, ಬೇರೆ ಸದಸ್ಯರು ಚರ್ಚೆ ಮಾಡಲು ಅವಕಾಶ ನೀಡಬೇಕು' ಎಂದು ಬೊಮ್ಮಾಯಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ‘ಕಾಂಗ್ರೆಸ್ ಸದಸ್ಯರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ದಯವಿಟ್ಟು ಸಹಕರಿಸಿ, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿಗೆ ಅವಕಾಶ ನೀಡಬೇಕು. ಅವರ ಹಕ್ಕುಗಳ ರಕ್ಷಣೆಯ ಹೊಣೆಯೂ ನನ್ನ ಮೇಲಿದೆ. ಹೀಗಾಗಿ ಧರಣಿಯನ್ನು ಕೈಬಿಟ್ಟು ಎಲ್ಲರೂ ತಮ್ಮ ಸ್ಥಾನಗಳಿಗೆ ಮರಳಬೇಕು' ಎಂದು ಮನವಿ ಮಾಡಿದರು.

ಅಮಾನತ್ತಿಗೆ ಸವಾಲು: ಈ ವೇಳೆ ಎದ್ದುನಿಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್, ‘ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಸದಸ್ಯರನ್ನ ಕೂಡಲೇ ಅಮಾನತ್ತು ಮಾಡಿ, ಅವರನ್ನು ಅಮಾನತ್ತು ಮಾಡಲು ನಿಮಗೇನು ಅಡ್ಡಿ. ನನ್ನನ್ನು ಸೇರಿಸಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಮಾನತ್ತು ಮಾಡಿ' ಎಂದು ಸವಾಲು ಹಾಕಿದರು.

ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್, ‘ನಮ್ಮನ್ನು ಅಮಾನತ್ತು ಮಾಡಿ ಎಂದು ಬರೆದುಕೊಟ್ಟುಬಿಡಿ ಅಮಾನತ್ತು ಮಾಡುತ್ತೇನೆ. ನಿಮ್ಮ ನಾಯಕರಿಗೆ ಹೇಳಿ ಅಮಾನತ್ತು ಮಾಡುವಂತೆ ಒಂದು ಪತ್ರ ಕೊಡಿ' ಎಂದು ಹೇಳಿದರು. ಈ ಹಂತದಲ್ಲಿ ಮಾತನಾಡಿದ ಜೆಡಿಎಸ್‍ನ ಸದಸ್ಯ ಎಚ್.ಡಿ.ರೇವಣ್ಣ, ‘ಹಿರಿಯರಾದ ರಮೇಶ್‍ಕುಮಾರ್ ಅವರೇ ಹೇಳುತ್ತಿದ್ದಾರೆ. ಸ್ಪೀಕರ್ ಅವರೇ ಕಾಂಗ್ರೆಸ್ ಸದಸ್ಯರನ್ನು ಅಮಾನತ್ತು ಮಾಡಿ, ನಮಗೆ ಮಾತನಾಡಲು ಅವಕಾಶ ಮಾಡಿಕೊಡಿ. ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಮ್ಮ ಪಕ್ಷದ ಸದಸ್ಯರು ಮಾತನಾಡಬೇಕಿದೆ' ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ರಮೇಶ್ ಕುಮಾರ್ ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಧರಣಿ ನಡೆಸುತ್ತಿದ್ದ ಎಷ್ಟು ಮಂದಿಯನ್ನು ಅಮಾನತ್ತು ಮಾಡಿದ್ದಾರೆಂದು ಹೇಳಬೇಕು' ಎಂದು ತಿರುಗೇಟು ನೀಡಿದರು. ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್, ಸದನವನ್ನು ಸೋಮವಾರ ಬೆಳಗ್ಗೆ 11ಗಂಟೆಗೆ ಸೇರುವಂತೆ ಮುಂದೂಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News