‘ಹಿಜಾಬ್’ ಸುತ್ತೋಲೆ ಸರಕಾರದ ಮನಸ್ಥಿತಿಯನ್ನು ಸ್ಪಷ್ಟಪಡಿಸಿದೆ: ಕರ್ನಾಟಕ ಮುಸ್ಲಿಂ ಜಮಾಅತ್

Update: 2022-02-18 12:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.18: ಹಿಜಾಬ್ ಸಮಸ್ಯೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವಾಗಲೇ ಸರಕಾರ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಅಧ್ಯಕ್ಷ ಮೌಲಾನ ಮುಫ್ತಿ ಅನ್ವರ್ ಅಲಿ ಸಾಹೇಬ್ ಗಂಭೀರವಾಗಿ ಆರೋಪಿಸಿದ್ದಾರೆ.

ಸರಕಾರ ತನ್ನ ಕಾರ್ಯಸೂಚಿಯನ್ನು ಜಾರಿಮಾಡಲು ತನ್ನ ಅಧೀನದಲ್ಲಿ ಇರುವ ಅಲ್ಪಸಂಖ್ಯಾತ ಇಲಾಖೆಯನ್ನು ಬಳಸಿಕೊಂಡು ತನ್ನ ದಾರಿಯನ್ನು ಸುಗಮಗೊಳಿಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುವ ವಸತಿ ಶಾಲೆ, ಕಾಲೇಜುಗಳು, ಮೌಲಾನಾ ಆಝಾದ್ ಮಾದರಿ ಶಾಲೆಗಳು ಮೊದಲಾದವುಗಳ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಇಲಾಖೆಯ ಕಾರ್ಯದರ್ಶಿ ಹೊರಡಿಸಿದ ಸುತ್ತೋಲೆಯು, ಸರಕಾರದ ಮನಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಸರಕಾರ ಹಂತ ಹಂತವಾಗಿ ಒಂದು ಧರ್ಮದ ಸ್ವಾತಂತ್ರ್ಯವನ್ನು ದಮನಿಸಲು ಹೊರಟಿರುವುದು ಆತಂಕವನ್ನು ಹುಟ್ಟು ಹಾಕಿದ್ದು, ಸರಕಾರ ಕೂಡಲೇ ಈ ಬಗ್ಗೆ ಪುನರ್ ಪರಿಶೀಲನೆಗೆ ಒಳಪಡಿಸಿ ವಿವಾದವನ್ನು ಇನ್ನಷ್ಟು ಜಟಿಲಗೊಳಿಸದೆ ಪರಿಹರಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News