ಕಾನೂನು ವಿವಿ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ನಡೆಸಿ: ಹೈಕೋರ್ಟ್

Update: 2022-02-18 13:26 GMT
ಸಾಂದರ್ಭಿಕ ಚಿತ್ರ

 ಬೆಂಗಳೂರು, ಫೆ.18: ಮೂರು ವರ್ಷಗಳ ಎಲ್‍ಎಲ್‍ಬಿ ಕೋರ್ಸ್‍ನ 2 ಮತ್ತು 4ನೆ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ವಿವಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ವೃತ್ತಿಪರ ಕೋರ್ಸ್‍ಗಳಲ್ಲಿ ವಿನಾಯಿತಿ ನೀಡಲಾಗದು. ವಿಶೇಷವಾಗಿ ಕಾನೂನು, ವೈದ್ಯಕೀಯ ಮತ್ತು ಇಂಜಿನಿಯರಿಂಗ್‍ನಂತಹ ಕ್ಷೇತ್ರಗಳಲ್ಲಿ ಪರೀಕ್ಷೆಗಳಿಂದ ವಿನಾಯಿತಿ ನೀಡುವುದು ಸರಿಯಲ್ಲ. ಅಂತೆಯೇ, ಕಾನೂನು ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಇನ್ನು ಕೋರ್ಸ್‍ನ ಪಠ್ಯಕ್ರಮ ಹಾಗೂ ಪರೀಕ್ಷಾ ವಿಧಾನಗಳನ್ನು ಶಿಕ್ಷಣ ತಜ್ಞರು ನಿರ್ಧರಿಸಬೇಕೇ ಹೊರತು ವಿದ್ಯಾರ್ಥಿಗಳಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಪರೀಕ್ಷೆಯನ್ನು ಹೇಗೆ ನಡೆಸಬೇಕು (ಆನ್‍ಲೈನ್/ಆಫ್‍ಲೈನ್) ಎಂಬ ಬಗ್ಗೆ ವಿವಿ 10 ದಿನಗಳಲ್ಲಿ ನಿರ್ಧರಿಸಿ, 3 ವರ್ಷದ ಎಲ್‍ಎಲ್‍ಬಿಯ 2 ಮತ್ತು 4ನೆ ಸೆಮಿಸ್ಟರ್‍ಗಳಿಗೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಕೋವಿಡ್ ಸೋಂಕು ತೀವ್ರವಿದ್ದ ಸಂದರ್ಭದಲ್ಲಿ ವಿವಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಯುಜಿಸಿ, ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕ ಹಾಗೂ ಆಂತರಿಕ ಮೌಲ್ಯಮಾಪನ ಆಧರಿಸಿ ಮುಂದಿನ ತರಗತಿಗೆ ಭಡ್ತಿ ನೀಡುವಂತೆ ಹೇಳಿದ್ದರೂ ಕೆಎಸ್‍ಎಲ್‍ಯು ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿರುವ ಕ್ರಮ ಸರಿಯಲ್ಲ. ಹೀಗಾಗಿ ಯುಜಿಸಿ ಸೂಚನೆಯಂತೆ ಪರೀಕ್ಷೆ ನಡೆಸದಿರಲು ವಿವಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕಳೆದ ಡಿಸೆಂಬರ್ 14ರಂದು 2 ಮತ್ತು 4ನೆ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸದಂತೆ ವಿವಿಗೆ ಆದೇಶಿಸಿತ್ತು. ಯುಜಿಸಿ ಸುತ್ತೋಲೆ ಪಾಲಿಸುವಂತೆ ಸೂಚಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿವಿ ಮೇಲ್ಮನವಿ ಸಲ್ಲಿಸಿತ್ತು. ಭಾರತೀಯ ವಕೀಲರ ಪರಿಷತ್ತು ಕಾನೂನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವಂತೆ ಸುತ್ತೋಲೆ ಮೂಲಕ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಪರೀಕ್ಷೆ ನಡೆಸಲು ಸಮ್ಮತಿಸಬೇಕು ಎಂದು ವಿವಿ ಮನವಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News