×
Ad

ಅಲ್ಪಸಂಖ್ಯಾತರಲ್ಲಿ ಭೀತಿ ಬಿತ್ತಲು ಮತಾಂತರ ನಿಷೇಧ ಕಾಯ್ದೆ ಜಾರಿ: ಸಿ.ಎಸ್. ದ್ವಾರಕಾನಾಥ್

Update: 2022-02-18 22:21 IST

ಬೆಂಗಳೂರು, ಫೆ.18: ಅಲ್ಪಸಂಖ್ಯಾತರಲ್ಲಿ ಭೀತಿ ಉಂಟು ಮಾಡಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ಪ್ರಬಲರು ದುರ್ಬಲರ ಮೇಲೆ ಮಾಡುತ್ತಿರುವ ಹಿಂಸೆಯ ಪ್ರತಿರೂಪವಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್ ಆರೋಪಿಸಿದ್ದಾರೆ. 

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಸರಕಾರವು ಹತ್ತಿಕ್ಕುತ್ತಿಲ್ಲ. ಇಂತಹ ಹಿಂಸಾಚಾರದಲ್ಲಿ ಅಪರಾಧಿಗಳು ಸಂಖ್ಯಾತ್ಮಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯಗಳಿಂದ ಬಂದವರಾಗಿದ್ದಾರೆ. ಹಾಗಾಗಿ ಸರಕಾರವು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. 

ಕುಣಿಗಲ್‍ನ ಪಾಸ್ಟರ್ ಮಾತನಾಡಿ, ರಾಜ್ಯದಲ್ಲಿ ಕ್ರೈಸ್ತ ಸಮುದಾಯದವರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಕ್ರೈಸ್ತ ಸಮುದಾಯದವರ ಮೇಲೆ ನಡೆಯುತ್ತಿರುವ ಹಲ್ಲೆಗಳ ವಿರುದ್ಧ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ದೂರು ಕೊಟ್ಟವರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ಪ್ರವೃತ್ತಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲರಾದ ರಾಬಿನ್ ಮಾತನಾಡಿ, ಹಳ್ಳಿಗಳಲ್ಲಿ ಕ್ರೈಸ್ತರ ಮೇಲೆ ದಬ್ಬಾಳಿಕೆಗಳು ನಡೆಯುತ್ತಿದೆ. ಕ್ರೈಸ್ತರ ಜೀವನೋಪಾಯಕ್ಕೂ ಕಷ್ಟವಾಗುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಈಗ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದರಿಂದ ಮತ್ತಷ್ಟು ಹಿಂಸೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಲೇಖಕಿ ಶರೀಫಾ ಕೆ. ಮಾತನಾಡಿ, ಸುಳ್ಳು ಮತಾಂತರ ವಿಚಾರವನ್ನು ಮುಂದಿಟ್ಟುಕೊಂಡು ಕ್ರೈಸ್ತರ ಮೇಲೆ ದಾಳಿಗಳು ನಡೆಯುತ್ತಿವೆ. ಸಾಂವಿಧಾನಿಕ ಆದರ್ಶಗಳನ್ನು ಮೂಲೆಗುಂಪು ಮಾಡಿ, ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯವಾಗಿದೆ. ಈ ದೇಶವೂ ಎಲ್ಲಾ ಸಮುದಾಯಗಳಿಗೆ ಸೇರಿದೆ ಎಂದು ಎಲ್ಲರೂ ಅರ್ಥ ಮಾಡಿಕೊಂಡು ಸಹಬಾಳ್ವೆ ನಡೆಸಬೇಕು ಎಂದು ಆಶಿಸಿದರು.

ಸಾಮಾಜಿಕ ಹೋರಾಟಗಾರ್ತಿ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಪೋಲಿಸರ ವರ್ತನೆಯಿಂದ ಬೇಸರವಾಗುತ್ತಿದೆ. ಅಲ್ಲದೆ, ಧಾರ್ಮಿಕ ಸಂಸ್ಥೆಗಳ ಮೇಲೆಯೇ ಗುರಿಯಾಗಿಸಿಕೊಂಡು ಹಲ್ಲೆ ಮಾಡಲಾಗುತ್ತಿದೆ. ಇದು ಮೂಲಭೂತ ಹಕ್ಕುಗಳ ಹರಣವಾಗಿರುತ್ತದೆ. ಸರಕಾರವು ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು. 

ಗೋಷ್ಠಿಯಲ್ಲಿ ವಕೀಲ ಅರವಿಂದ ನಾರಾಯಣ್, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ. ಮೋಹನ್ ರಾಜ್, ಡಾ. ಸಿಲ್ವಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News