ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ 927 ಮಳಿಗೆಗಳು ಖಾಲಿ: ಸಚಿವ ಶ್ರೀರಾಮುಲು
ಬೆಂಗಳೂರು, ಫೆ.18: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ನಿರ್ಮಿಸಲಾದ 4,465 ವಾಣಿಜ್ಯ ಮಳಿಗೆಗಳ ಪೈಕಿ 927 ಮಳಿಗೆಗಳು ಖಾಲಿ ಉಳಿದಿವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಸಿಕ 13.61 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಕೆಲ ಮಳಿಗೆಗಳನ್ನು ಅಡಮಾನ ಮಾಡಿ 540 ಕೋಟಿ ಸಾಲ ಪಡೆದಿರುವುದಾಗಿ ಹೇಳಿದರು.
ಕೆಎಸ್ಸಾರ್ಟಿಸಿ ಸಂಸ್ಥೆಯಿಂದ ಯಾವುದೇ ವಾಣಿಜ್ಯ ಮಳಿಗೆಗಳನ್ನು ಅಡಮಾನ ಮಾಡಿಲ್ಲ. ಬಿಎಂಟಿಸಿಯಿಂದ ಶಾಂತಿನಗರ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರದ ಕಟ್ಟಡ (ಟಿಟಿಎಂಸಿ)ವನ್ನು ಕೆನರಾ ಬ್ಯಾಂಕ್‍ನಲ್ಲಿ 390 ಕೋಟಿ ರೂಪಾಯಿಗೆ ಅಡಮಾನ ಮಾಡಲಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ನಗರದ ಹೂಸೂರುನಲ್ಲಿರುವ ವಾಣಿಜ್ಯ ಮಳಿಗೆಯನ್ನು ನೂರು ಕೋಟಿ ರೂಪಾಯಿಗಳಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾಗೆ ಅಡಮಾನ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರ್ಗಿ ಬಸ್ ನಿಲ್ದಾಣದ 6.28 ಎಕರೆ ನಿವೇಶನವನ್ನು ಕೆನರಾ ಬ್ಯಾಂಕ್‍ಗೆ 50 ಕೋಟಿ ರೂಪಾಯಿಗೆ ಅಡಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.