ಹಿಜಾಬ್ ವಿವಾದದ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಜ್ಞಾನೇಂದ್ರ
ಕಲಬುರಗಿ, ಫೆ.19: ಶಾಲೆಯಲ್ಲಿ ಸಮವಸ್ತ್ರ ಅಂದರೆ ಸಮಾನತೆ. ಬಡವ, ಶ್ರೀಮಂತ, ಮೇಲೂ ಕೀಳು ಎಂಬ ಭಾವನೆ ಇಲ್ಲದೆ ಎಲ್ಲರೂ ಒಂದೇ ಎಂದು ಅರಿತು ಶೈಕ್ಷಣಿಕ ಜೀವನ ರೂಪಿಸಿಕೊಳ್ಳಬೇಕು. ದೇಶದ ಮಕ್ಕಳಲ್ಲಿ ಏಕತೆ, ಸಂಸ್ಕಾರ, ಸಮಾನತೆ, ಸಮಗ್ರತೆ ತುಂಬಾ ಕೇಂದ್ರ ಶಾಲೆ ಕಾಲೇಜುಗಳು ಆಗಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶನಿವಾರ ಇಲ್ಲಿನ ನಾಗನಹಳ್ಳಿ ಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ವೇಷ ಭೂಷಣ, ಜಾತಿ ಧರ್ಮ ಕುರಿತು ಮಕ್ಕಳಿಗೆ ಏನು ಕಲಿಸಿ ಕೊಡುತ್ತಿದ್ದೇವೆ? ಇದು ಭಾರತದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬಿರಲಿದೆ. ಈ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಯಾರೇ ಪ್ರಚೋದನೆ ನೀಡಿದರೆ ಅಂಥವರನ್ನು ಖಂಡಿಸುವ ಕೆಲಸಗಳು ಆಗಬೇಕು ಎಂದರು.
ಸಾಮಾಜಿಕ ಕಾಳಜಿ ಹೊಂದಿರುವ ನಾವೆಲ್ಲರೂ ಮಕ್ಕಳನ್ನು ಈ ಸ್ಥಿತಿಯಿಂದ ಹೊರಗೆ ತರುವ ಕೆಲಸ ಆಗಬೇಕು. ಕೋರ್ಟ್, ಕಾಯ್ದೆ, ಸಂವಿಧಾನ ವಿರುದ್ಧ ಯಾರು ಹೋಗುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂಘಟನೆಗಳ ಪ್ರಚೋದನೆ ಹಾಗೂ ಮತಾಂಧ ಶಕ್ತಿಗಳು ಹಿಜಾಬ್ ವಿವಾದದ ಹಿಂದಿರುವುದು ತಿಳಿದು ಬಂದಿದೆ. ಯಾರೇ ಇದ್ದರು ಸಹ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡಲಾಗುವುದು. ಅಲ್ಲದೇ ಸಂಘಟನೆಗಳನ್ನು ನೀರ್ಜಿವ ಮಾಡಲು ಶೀಘ್ರದಲ್ಲೇ ಕ್ರಮ ವಹಿಸಲಾಗುವುದು. ಕೋರ್ಟ್ ಮಧ್ಯಂತರ ಆದೇಶ ಎಲ್ಲರೂ ಪಾಲನೆ ಆಗುತ್ತಿದೆ. ಹಿಜಾಬ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಗುತ್ತಿದೆ ಎಂದು ಅವರು ತಿಳಿಸಿದರು.
ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆಗೆ ಮಾಧ್ಯಮಗಳೇ ಸಾಕ್ಷಿ. ಅವರು ಹೇಳಿದ ಕೆಂಪು ಕೋಟೆ ಮೇಲೆ ಇನ್ನೂರು ಮುನ್ನೂರು ವರ್ಷಗಳ ಬಳಿಕ ಹಾರಬಹುದೇನೋ ಎಂಬ ಮಾತನ್ನು ಕಾಂಗ್ರೆಸ್ ಪಕ್ಷದವರು ವಿವಾದ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನವರು ಇಲ್ಲದ ಸಲ್ಲದ ಧರಣಿ ಸತ್ಯಾಗ್ರಹ ಮಾಡಿದರೆ ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನೀರಲ್ಲಿ ಮುಳುಗುವವನಿಗೆ ಹುಲ್ಲು ಕಡ್ಡಿಯೇ ಆಶ್ರಯ ಎಂಬಂತೆ ಈಶ್ವರಪ್ಪ ನವರ ಮಾತನ್ನೇ ಕೊನೆ ಅಸ್ತ್ರವಾಗಿಸಿಕೊಂಡಿದೆ. ಕಾಂಗ್ರೆಸ್ ಹೇಳುವುದು ಮಾಡುವುದು ಎಲ್ಲಾ ಬೊಗಸ ಎಂದು ಅವರು ಕಿಡಿಕಾರಿದರು.