ನಮ್ಮಲ್ಲಿ ಇನ್ನು ಮುಂದೆ ಸಮವಸ್ತ್ರ ಕಡ್ಡಾಯವಿಲ್ಲ ಎಂದ ಮೈಸೂರಿನ ಖಾಸಗಿ ಕಾಲೇಜು

Update: 2022-02-19 16:14 GMT
ಸಾಂದರ್ಭಿಕ ಚಿತ್ರ

ಮೈಸೂರು: ನಮಗೆ ಸಂಘರ್ಷ ಬೇಡ ಶಿಕ್ಷಣ ಬೇಕು ಹಾಗಾಗಿ ನಮ್ಮ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಯೊಂದು ನಿರ್ಧಾರ ಕೈಗೊಂಡಿರುವ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಹಿಜಾಬ್ ವಿಚಾರದಿಂದ ಇಡೀ ರಾಜ್ಯವೇ ಗೊಂದಲಕ್ಕೀಡಾಗಿರುವ ಸಮಯದಲ್ಲಿ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಲ್ಲ ಎಂದು ಹೇಳಿದೆ.

ಶನಿವಾರ ಎಸ್‍ಡಿಪಿಐ ನೇತೃತ್ವದಲ್ಲಿ ಪೋಷಕರುಗಳು ಮತ್ತು ವಿವಿಧ ಸಂಘಟನೆಗಳವರು ಕಾಲೇಜು ಆಡಳಿತ ಮಂಡಳಿಯೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ್ದು, ಇದರ ಪರಿಣಾಮ ಕಾಲೇಜು ಆಡಳಿತ ಮಂಡಳಿ ಸೋಮವಾರದಿಂದ ಸಮವಸ್ತ್ರ ಇಲ್ಲದೆ ವಿದ್ಯಾರ್ಥಿಗಳು ತಮಗೆ ಇಷ್ಟ ಬಂದ ಉಡುಗೆಯೊಂದಿಗೆ ಕಾಲೇಜಿಗೆ ಬರಬಹುದು ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ವಾರ್ತಭಾರತಿಯೊಂದಿಗೆ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ನಿರ್ಧಾರ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಹಿಜಾಬ್ ನಂತಹ ಧಾರ್ಮಿಕ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ಅಶಾಂತಿಯನ್ನು ಉಂಟು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕಾಲೇಜು ಸಮವಸ್ತ್ರ ಕಡ್ಡಾಯವಲ್ಲ ಎಂದು ನಿರ್ಧಾರ ಕೈಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕೊರೋನ ಬಂದ ಸಮಯದಿಂದಲೇ ಸಮವಸ್ತ್ರ ಕಡ್ಡಾಯ ಎಂದು ಹೇಳಿಲ್ಲ. ಹಾಗಾಗಿ ಆ ಸಂಸ್ಥೆಯಲ್ಲಿ ಸಮವಸ್ತ್ರ ಕಡ್ಡಾಯವಿರಲಿಲ್ಲ, ವಿದ್ಯಾರ್ಥಿಗಳು ಯಾವ ಉಡುಗೆಯನ್ನಾದರೂ ಧರಿಸಿ ಬರಬಹುದು. ಆದರೆ ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಕಾಲೇಜು ಆಡಳಿತ ಮಂಡಳಿಗೆ ನಾವು ಸೂಚಿಸಿದ್ದೇವೆ.
-ಡಿ.ಕೆ.ಶ್ರೀನಿವಾಸಮೂರ್ತಿ, ಡಿಡಿಪಿಯು, ಮೈಸೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News