ಕೊಣಾಜೆ: 'ತುಳುನಾಡಿನ ಅವಳಿ ವೀರರ ಆರಾಧನೆ' ಕೃತಿ ಬಿಡುಗಡೆ
ಕೊಣಾಜೆ: ಬಿಲ್ಲವ ಸಮುದಾಯದ ಕೋಟಿ ಚೆನ್ನಯ, ಕಾಂತಾಬಾರೆ ಬುದಾಬಾರೆ, ಮುಗೇರ ಸಮುದಾಯದ ಮುದ್ದಕಳಲ ಹಾಗೂ ಆದಿ ದ್ರಾವೀಡ ಸಮಯದಾಯದ ಕಾನದ ಕಾಟದ- ಅವಳಿ ವೀರರ ಸಾಂಸ್ಕೃತಿಕ ಕಥಾನಕಗಳನ್ನು ಡಾ.ಯಶು ಕುಮಾರ್ ಅವರು ಬಹುಮುಖವಾಗಿ ಅಧ್ಯಯನ ನಡೆಸಿ, ಅವುಗಳ ಸಂದೇಶಗಳನ್ನು ಮತ್ತು ಆಶಯಗಳನ್ನು ಸಮರ್ಪಕವಾಗಿ ಗುರುತಿಸಿದ್ದಾರೆ ಎಂದು ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಡಾ.ಯಶುಕುಮಾರ್ ಅವರ ತುಳುನಾಡಿನ ಅವಳಿವೀರರ ಆರಾಧನೆ' ಜಾನಪದೀಯ ಅಧ್ಯಯನ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತುಳುನಾಡಿನ ಅವಳಿ ವೀರರ ಪರಿಕಲ್ಪನೆಯನ್ನು ಒಂದು ವಿಸ್ತಾರವಾದ ಚೌಕಟ್ಟಿನಲ್ಲಿಟ್ಟುಕೊಂಡು, ಜನಾಂಗೀಯ ವಿವರಗಳನ್ನು ಕಲೆ ಹಾಕಿ, ಸಮರ್ಥವಾದ ಸೈದ್ಧಾಂತಿಕ ಚೌಕಟ್ಟಿನೊಂದಿಗೆ ಡಾ.ಯಶು ಕುಮಾರ್ ಅವರು ಈ ಅಧ್ಯಯನವನ್ನು ಮಾಡಿದ್ದಾರೆ. ಅವಳೀ ವೀರರ ಪರಿಕಲ್ಪನೆಗೆ ಸಂಬಂಧಿಸಿದಂತೆ ಇರುವ ಜ್ಞಾನವನ್ನು ವಿಸ್ತರಿಸುವ ಜೊತೆಗೆ ಮತ್ತು ಆ ವಿಷಯವನ್ನು ಇನ್ನಷ್ಟು ವಿಶ್ಲೇಷಿಸಿ ನೋಡುವ ಅಪೂರ್ವ ಗ್ರಂಥ ಇದಾಗಿದೆ ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ತುಳು ಜಾನಪದ ಕ್ಷೇತ್ರದಲ್ಲಿ ಕೃಷಿ ಮಾಡಲು ವಿಪುಲ ಅವಕಾಶಗಳಿದ್ದು, ಅಧ್ಯಯನಾಸಕ್ತರು ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ತುಳುನಾಡಿನ ಜಾನಪದೀಯ ಅಧ್ಯಯನಗಳ ಮೂಲಕ ಈ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಅನನ್ಯತೆ ಸೇರಿದಂತೆ ಮೌಲಿಕ ವಿಚಾರಗಳು ದಾಖಲೀಕರಣಗೊಳ್ಳಬೇಕು. ತುಳು ನಾಡಿನ ಅವಳಿ ವೀರರ ಮತ್ತು ಆರಾಧನೆಯ ಬಗೆಗೆ ಡಾ.ಯಶುಕುಮಾರ್ ಅವರು ಬರೆದಿರುವ ಕೃತಿಯು ಅತ್ಯಂತ ಮಹತ್ವವಾದುದು ಎಂದು ಹೇಳಿದರು.
ತುಳುನಾಡು ದೈವ ದೇವರ ಆರಾಧನಾ ಕೇಂದ್ರವಾಗಿದ್ದು, ತುಳುನಾಡಿನ ಆರಾಧನೆಯ ಬಗ್ಗೆ ಮುಂದೆ ಅಧ್ಯಯನ ಮಾಡುವವರಿಗೂ ಈ ಕೃತಿಯು ಆಕರ ಗ್ರಂಥವಾಗುತ್ತದೆ. ಇದರಲ್ಲಿ ಸತ್ಯವೂ ಇದೆ, ಸತ್ಯವೂ ಇದೆ ಎಂದರು.
ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಸೋಮಣ್ಣ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಅಭಯ ಕುಮಾರ್ , ಸಹ ಪ್ರಾಧ್ಯಾಪಕ ಡಾ.ಕೆ.ನಾಗಪ್ಪ ಗೌಡ, ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ, ಸಹಾಯಕ ಪ್ರಾಧ್ಯಾಪಕರಾದ ಡಾ.ಮಾಧವ ಮೊದಲಾದವರು ಉಪಸ್ಥಿತರಿದ್ದರು.
ಆಕೃತಿ ಪಬ್ಲಿಕೇಶನ್ ನ ಕಲ್ಲೂರು ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ.ಯಶುಕುಮಾರ್ ವಂದಿಸಿದರು. ವಿದ್ಯಾರ್ಥಿ ರಾಮಾಂಜಿ ಜಾನಪದ ಗೀತೆ ಹಾಡಿದರು. ಮದು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ತುಳುವಿನ ಕೆಲವು ಜನಪದ ಕಥಾನಕಗಳಲ್ಲಿ ಶಿಲ್ಪಿಯ ಕೈಕಾಲು ಕಡಿಯುವ ಪ್ರಸಂಗ ಬರುತ್ತದೆ. ದುಡಿಯುವ ವರ್ಗದ ಚಲನಶೀಲತೆ ಮತ್ತು ಸೃಜನಶೀಲತೆಯನ್ನು ಆಳುವ ವರ್ಗವು ಕಸಿದುಕೊಳ್ಳುವುದನ್ನು ಆ ಕಾರ್ಮಿಕರ ಕೈಕಾಲು ಕಡಿಯುವ ಪ್ರಸಂಗವೂ ಧ್ವನಿಸುತ್ತದೆ. ಒಂದು ಜನಾಂಗದ ಚಲನಶೀಲತೆ ಮತ್ತು ಸೃಜನಶೀಲತೆಯನ್ನು ತೆಗೆದುಹಾಕಿದರೆ ಮತ್ತೆ ಆ ಜನಾಂಗವು ಏನೂ ಮಾಡಲು ಸಾಧ್ಯವಿಲ್ಲ. ಆ ಇಡೀ ಜನಾಂಗವೇ ಅವನತಿಯತ್ತ ಸಾಗುತ್ತದೆ.
ಪ್ರೊ.ಕೆ.ಚಿನ್ನಪ್ಪ ಗೌಡ, ಜಾನಪದ ವಿದ್ವಾಂಸರು