ಐಸಿಡಿಎಸ್ ಯೋಜನೆಯಡಿ ಕಳಪೆ ಆಹಾರ ಪೂರೈಕೆ: ಹೈಕೋರ್ಟ್ ನೋಟಿಸ್
Update: 2022-02-20 17:14 IST
ಬೆಂಗಳೂರು, ಫೆ. 20: ‘ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆಗಳ(ಐಸಿಡಿಎಸ್) ಯೋಜನೆಯಡಿ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ ಎಂದು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಹುನಗುಂದದ ಅಮರಾವತಿ ಗ್ರಾ.ಪಂ.ಅಧ್ಯಕ್ಷೆ ಸಂಗೀತಾ ಗದುಗಿನ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಹರಿಹರೇಶ್ವರ ಮಹಿಳಾ ಉದ್ಯೋಗ ಮತ್ತು ಸೇವಾ ಸಂಘ, ರೇಣುಕಾದೇವಿ ಪ್ರಗತಿಪರ ಮಹಿಳಾ ಸೇವಾ ಸಂಘ, ಅಧ್ಯಕ್ಷರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.