ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2022-02-20 11:51 GMT
 ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು, ಫೆ. 20: ‘ಶಾಲಾ-ಕಾಲೇಜುಗಳಲ್ಲಿ ಪ್ರಾಂಶುಪಾಲರು ಸೇರಿದಂತೆ ಆಡಳಿತ ಮಂಡಳಿ ಮುಸ್ಲಿಮ್ ಹೆಣ್ಣು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ' ಎಂದು ಪ್ರಗತಿಪರ ಚಿಂತಕ ಹಾಗೂ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ರವಿವಾರ ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಸ್ಥೆ ವತಿಯಿಂದ ‘ಕರ್ನಾಟಕ ಅಂಧರ ವಿಮೋಚನಾ ವೇದಿಕೆ' ಸಹಯೋಗದೊಂದಿಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮತಾಂಧರರು ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಈ ದೇಶವು ಒಂದು ಧರ್ಮದ ಸ್ವತ್ತಲ್ಲ, ಬದಲಾಗಿ ಬಹುತ್ವ ಸಂಸ್ಕøತಿಯ ದೇಶ ಎಂದು ಅರ್ಥೈಸಿಕೊಳ್ಳಬೇಕು. ಮತಾಂಧತೆಯಿಂದ ಹೊರಬಂದು ದೇಶ ಕಟ್ಟಬೇಕು. ಅದನ್ನು ಹೊರತುಪಡಿಸಿ ರಾಜಕೀಯಕ್ಕಾಗಿ ಹೆಣ್ಣು ಮಕ್ಕಳ ಬಾಳು ಹಾಳು ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಕಣ್ಣಿಲ್ಲದಿದ್ದರೂ ಅಂತರ್‍ದೃಷ್ಟಿ ಇರಬೇಕು. ಆಗ ಅನ್ಯರ ನೋವು ಅರ್ಥವಾಗುತ್ತದೆ. ಕಣ್ಣಿದ್ದವರು ಸಮುದಾಯ ಎಂದರೆ ಜಾತಿ, ಧರ್ಮ ಎಂಬ ಭಾವನೆಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅಂಧರು ಮನುಷತ್ವದಿಂದ ಒಂದಾಗಿ ತಮ್ಮ ಸಮುದಾಯ ಭಾವನೆಯನ್ನು ಎತ್ತಿಹಿಡಿದಿದ್ದಾರೆ ಎಂದು ಅವರು ಹೇಳಿದರು. 

ರಂಗಾಯಣದ ವಿಶ್ರಾಂತ ನಿರ್ದೇಶಕ ಜನಾರ್ಧನ್(ಜನ್ನಿ) ಮಾತನಾಡಿ, ‘ನಮ್ಮ ದೇಶದಲ್ಲಿರುವ 130 ಕೋಟಿ ಜನರ ಸಂಪತ್ತು, ಕೇವಲ 20 ಜನರಲ್ಲಿ ಮಾತ್ರ ಹಂಚಿಕೆಯಾಗಿದೆ. ಈ ದೇಶದ ಪ್ರಧಾನಿ ಅವರಿಗೆ ಬೆನ್ನೆಲುಬಾಗಿದ್ದಾರೆ. ಆದುದರಿಂದ ಮಧ್ಯಮ ವರ್ಗದ ದುಡಿಮೆಯ ಲಾಭಾಂಶ 20 ಮಂದಿಯಲ್ಲಿ ಕೇಂದ್ರಿಕೃತವಾಗಿದೆ' ಎಂದರು. 

ದಲಿತ ಮುಖಂಡ ಹಾಗೂ ಪ್ರಶಸ್ತಿ ಪುರಸಕೃತ ಲಕ್ಷ್ಮಿ ನಾರಾಯಣ ನಾಗವಾರ ಮಾತನಾಡಿ, ‘ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ದಲಿತರಿಗೆ ಅನ್ಯಾಯ ಮಾಡಿದರು. ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಪುನಃ ದಲಿತರನ್ನು ಜಾತಿ ವ್ಯವಸ್ಥೆಯಲ್ಲಿಯೇ ಬಂಧಿಸಲು ಯತ್ನ ನಡೆಸಲಾಗುತ್ತಿದೆ. ಹಿಂದೂಧರ್ಮದಿಂದ ಬೌದ್ಧಧರ್ಮಕ್ಕೆ ಮತಾಂತರರಾದರೆ, ಅದು ಮತಾಂತರವಲ್ಲ. ಆದರೆ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ, ಅದು ಮತಾಂತರವಾಗುತ್ತದೆ ಎಂದು ಸರಕಾರ ಹೇಳುವುದು ಹಾಸ್ಯಾಸ್ಪದ ವಿಚಾರ ಎಂದು ಟೀಕಿಸಿದರು. 

ಅಂಧ ಬರಹಗಾರ ಮುದಿಗೆರೆ ರಮೇಶ್ ಕುಮಾರ ಮಾತನಾಡಿ, ‘ಅಂಧರಿಗೆ ಇಂತಹ ವೇದಿಕೆಗಳನ್ನು ನಿರ್ಮಿಸಿ, ಸಾಂಸ್ಕøತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಅವರಲ್ಲಿ ಮೂಡಿಸಬೇಕು. ಅಂದ ಲೇಖಕರಿಗೆ ದತ್ತಿನಿಧಿಗಳನ್ನು ಸ್ಥಾಪಿಸಲು ಸರಕಾರ ಮುಂದೆ ಬರಬೇಕು ಎಂದು ಮನವಿ ಮಾಡಿದರು. 

ಸಮಾರಂಭದಲ್ಲಿ ಗಾನಯೋಗಿ ಪದ್ಮಶ್ರೀ ಡಾ.ಪುಟ್ಟರಾಜ ಗವಾಯಿ ಸಂಗೀತ ಪ್ರಶಸ್ತಿಯನ್ನು ಗಾಯಕಿ ಬಿ.ಕೆ. ಸುಮಿತ್ರಾ ಅವರಿಗೆ ಹಾಗೂ ವಿಶ್ವಚೇತನ ಡಾ.ಹೆಲನ್ ಕೆಲ್ಲರ್ ಸೇವಾರತ್ನ ಪ್ರಶಸ್ತಿಯನ್ನು ಸಮಾಜ ಸೇವಕ ಲಕ್ಷ್ಮಿ ನಾರಾಯಣ ನಾಗವಾರ ಅವರಿಗೆ ನೀಡಲಾಯಿತು. ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್‍ಲಿಪಿ ಪುಸ್ತಕಗಳನ್ನು, ಎಸೆಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಗಾಯಕಿ ಗಿರಿಜಾ ರೈಕ್ವಾ ಉಪಸ್ಥಿತರಿದ್ದರು. 

ದಸಂಸ ಮರೆಯಾಗಿಲ್ಲ: ದಲಿತ ಸಂಘರ್ಷ ಸಮಿತಿ(ಡಿಎಸ್‍ಎಸ್) ಮಿಂಚಿ ಮರೆಯಾಯಿತು ಎಂದು ಕೆಲವು ಪ್ರಚಾರ ಮಾಡಲು ಪ್ರಾರಂಭಿಸಿದರು. ಆದರೆ, ದಸಂಸ ವಿಜನೆಯಾಗಿದೆಯೇ, ಹೊರತಾಗಿ ಮರೆಯಾಗಿಲ್ಲ. ವಿಕೇಂದ್ರಿಕರಣ ತತ್ವದಿಂದ ಡಿಎಸ್‍ಎಸ್ ಜೀವಾಂತವಾಗಿದೆ. ಸಂಘಟನೆಯು ಒಂದಾಗಿದದ್ದು, ಹಲವಾರು ಕಡೆ ಹಬ್ಬಿದೆ'

-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News