×
Ad

ಈಶ್ವರಪ್ಪ ರಾಜೀನಾಮೆಗೆ ಪ್ರತಿಪಕ್ಷ ಕಾಂಗ್ರೆಸ್ ಪಟ್ಟು: ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಸಾಧ್ಯತೆ

Update: 2022-02-20 18:31 IST

ಬೆಂಗಳೂರು, ಫೆ. 20: ‘ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಲು' ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ತನ್ನ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ನಾಳೆ (ಫೆ.21) ವಿಧಾನ ಮಂಡಲದ ಉಭಯ ಸದನದ ಜಂಟಿ ಅಧಿವೇಶವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಸಾಧ್ಯತೆ ಇದೆ.

ಸ್ಪೀಕರ್ ಸಂಧಾನಕ್ಕೆ ಮಣಿಯದ ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ತೀರ್ಮಾನಿಸಿದ್ದು, ನಾಳೆಯೆ ಚರ್ಚೆ ಇಲ್ಲದೆ ಕೆಲ ವಿಧೇಯಕಗಳಿಗೆ ಅನುಮೋದನೆ ಪಡೆದು ಕಲಾಪವನ್ನು ಅರ್ನಿಷ್ಟಾವಧಿಗೆ ಮುಂದೂಡಲಾಗುತ್ತದೆ ಎಂದು ಗೊತ್ತಾಗಿದೆ. ಒಂದು ವೇಳೆ ಪ್ರತಿಪಕ್ಷ ಸದಸ್ಯರು ತಮ್ಮ ಧರಣಿ ಹಿಂತೆಗೆದುಕೊಂಡರೆ ಮಾತ್ರ ಕಲಾಪ ನಿಗದಿತ ಅವಧಿಯಂತೆ ಫೆ.25ರ ವರೆಗೆ ನಡೆಯುವ ನಿರೀಕ್ಷೆ ಇದೆ.

ನಾಳೆ(ಪೆ.21) ಬೆಳಗ್ಗೆ 11ಗಂಟೆಗೆ ಕಲಾಪ ನಿಗದಿಯಾಗಿದ್ದು, ಕಾರ್ಯಕಲಾಪ ಪಟ್ಟಿಯಲ್ಲಿ ಪ್ರಶ್ನೋತ್ತರ, ವಿಧೇಯಕಗಳ ಪರ್ಯಾಲೋಚನೆ, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾರ್ಪಣೆ ಸಲ್ಲಿಸಲು ಅಪ್ಪಣೆ ಕೋರುವ ಪ್ರಸ್ತಾವಗಳಿವೆ. ಧರಣಿ ಮುಂದುವರಿದರೆ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಈಗಾಗಲೇ ಅಧಿವೇಶನ ಕಲಾಪದ ಅರ್ಧ ಅವಧಿ ಮುಗಿದಿದ್ದು, ರಾಜ್ಯದ ನೆಲ ಜಲ, ಭಾಷೆ, ಜನರ ಸಮಸ್ಯೆಗಳು, ಹಿಜಾಬ್ ವಿವಾದ ಸೇರಿದಂತೆ ಇಂತಹ ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ, ಅಧಿವೇಶನದ ಉದ್ದೇಶವೇ ಈಡೇರುತ್ತಿಲ್ಲದ ಕಾರಣ ಸರಕಾರ ಅಧಿವೇಶನವನ್ನು ಮೊಟಕುಗೊಳಿಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಸದನದಲ್ಲಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ನೀಡಿದ ಹೇಳಿಕೆ ಪ್ರತಿಧ್ವನಿಸಲಿದ್ದು, ಸದನದ ಹೊರಗೆ ಹೋರಾಟಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದ್ದು, ಕಾಂಗ್ರೆಸ್‍ಗೆ ಅವಕಾಶ ನೀಡಿದರೂ ಸದನದಲ್ಲಿ ಚರ್ಚೆಗೆ ಬಾರದೆ ಬೀದಿಗೆ ಬಂದಿದೆ ಎಂದು ಬಿಂಬಿಸಲು ಬಿಜೆಪಿ ಯೋಜನೆ ರೂಪಿಸಿದೆ. ಹೀಗಾಗಿ ಈ ಬಾರಿಯ ಅಧಿವೇಶನ ಮೊಟಕುಗೊಳ್ಳುವುದು ಬಹುತೇಕ ಖಚಿತವಾಗಿದೆ.

ಈ ಹಿಂದೆಯೂ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ಭಾಷಣವನ್ನೆ ಮೊಟಕುಗೊಳ್ಳುವಂತೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯದೇ ಜಂಟಿ ಅಧಿವೇಶನ ಮೊಟಕಾಗುವಂತೆ ಮಾಡುತ್ತಿದೆ. ನಾಳೆಯೂ ಸ್ಪೀಕರ್, ಕಾಂಗ್ರೆಸ್ ನಾಯಕರ ಮನವೊಲಿಕೆ ಪ್ರಯತ್ನ ನಡೆಸಿ ಕಲಾಪ ನಡೆಸಲು ಯತ್ನಿಸಲಿದ್ದಾರೆ.

ಆದರೆ, ಪ್ರತಿಪಕ್ಷ ಕಾಂಗ್ರೆಸ್, ಯಾವುದೇ ಕಾರಣಕ್ಕೂ ಹೋರಾಟ ಕೈಬಿಡಬಾರದೆಂದು ನಿರ್ಧಾರಕ್ಕೆ ಬಂದಿದ್ದರೆ, ಬಿಜೆಪಿ, ಈಶ್ವರಪ್ಪ ರಾಜೀನಾಮೆ ಪಡೆಯಬಾರದು ಎಂದು ತೀರ್ಮಾನಿಸಿದೆ. ಎರಡೂ ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತಮ್ಮ-ತಮ್ಮ ನಿಲುವಿಗೆ ಅಂಟಿಕೊಂಡು ಕುಳಿತಿವೆ. ಹೀಗಾಗಿ ಸದನ ನಾಳೆಯೂ ಸಹಜ ಸ್ಥಿತಿಗೆ ಬರುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಸದನ ಮುಂದೂಡಿಕೆ ಮಾಡುವ ಸಾಧ್ಯತೆಗಳು ಸ್ಪಷ್ಟ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News