×
Ad

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿ ವಿಚಾರ: ಶಿಫಾರಸ್ಸು ಜಾರಿಗೆ ಉನ್ನತಾಧಿಕಾರಿ ಸಮಿತಿ ಸಭೆ ನಡೆಸಿ; ಹೈಕೋರ್ಟ್

Update: 2022-02-20 18:39 IST

ಬೆಂಗಳೂರು, ಫೆ.20: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅಮೈಕಸ್ ಕ್ಯೂರಿ ಸಲ್ಲಿಸಿರುವ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಉನ್ನತಾಧಿಕಾರಿ ಸಮಿತಿ ಸಭೆ ನಡೆಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ರಾಜ್ಯದಲ್ಲಿ ಸಮರ್ಥವಾಗಿ ಜಾರಿಗೊಳಿಸುವ ಸಂಬಂಧ ಹೈಕೋರ್ಟ್ 2013ರಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಗತ್ಯ ನೆರವು ನೀಡಲು ನಿಯೋಜನೆಗೊಂಡಿರುವ ಅಮೈಕಸ್ ಕ್ಯೂರಿ ಆದ ಹಿರಿಯ ವಕೀಲ ಕೆ.ಎನ್ ಫಣೀಂದ್ರ ವಾದ ಮಂಡಿಸಿ, ಖಾಲಿಯಿರುವ ಶೈಕ್ಷಣಿಕ ಸಮನ್ವಯಕಾರರ ಹುದ್ದೆಗಳನ್ನು ಒಂದು ತಿಂಗಳ ಅವಧಿಯಲ್ಲಿ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಅಂತೆಯೇ ಇನ್ನೂ ಹಲವು ಶಿಫಾರಸುಗಳನ್ನು ನೀಡಲಾಗಿದ್ದು, ಈ ವಿಚಾರಗಳ ಕುರಿತು ಉನ್ನತಾಧಿಕಾರ ಸಭೆಯಲ್ಲಿ ಚರ್ಚೆ ನಡೆಸಬೇಕಿದೆ. ಈ ಕುರಿತು ಸಭೆ ನಡೆಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಸಭೆ ನಡೆಸುವಂತೆ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿತು.

ಇದೇ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, ಶಾಲೆ ತೊರೆದಿರುವ 6 ರಿಂದ 14 ವಯಸ್ಸಿನ ಮಕ್ಕಳ ದತ್ತಾಂಶ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮನೆಮನೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.

ಆದರೆ, ಸಮೀಕ್ಷಾ ವರದಿಯಲ್ಲಿ ಕೆಲವು ದೋಷಗಳಿದ್ದು, ಅವುಗಳನ್ನು ಸರಿಪಡಿಸಲು ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ, ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News