ಮೇಕೆದಾಟು ಪಾದಯಾತ್ರೆ 5 ದಿನಕ್ಕೆ ಸೀಮಿತ: ಸಂಸದ ಡಿ.ಕೆ.ಸುರೇಶ್

Update: 2022-02-20 14:14 GMT

ಬೆಂಗಳೂರು, ಫೆ. 20: ‘ನಮ್ಮ ನೀರು ನಮ್ಮ ಹಕ್ಕು' ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಎರಡನೇ ಹಂತದ ಪಾದಯಾತ್ರೆಗೆ ಫೆ.27ರ ಬೆಳಗ್ಗೆ 9ಗಂಟೆಗೆ ರಾಮನಗರದಲ್ಲಿ ಚಾಲನೆ ನೀಡಲಿದ್ದು, ಪಾದಯಾತ್ರೆ ಐದು ದಿನಕ್ಕೆ ಸೀಮಿತಗೊಳಿಸಲಾಗಿದೆ' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ರವಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೊದಲು ಬೆಂಗಳೂರಿನಲ್ಲೆ ಐದು ದಿನಗಳ ಪಾದಯಾತ್ರೆ ಮಾಡಲು ನಿರ್ಧರಿಸಿದ್ದೆವು. ಆದರೆ, ಆಯವ್ಯಯ ಮಂಡನೆ ಹಿನ್ನೆಲೆಯಲ್ಲಿ ಮೂರು ದಿನಗಳಿಗೆ ಸೀಮಿತಗೊಳಿಸಿದ್ದು, ನೀರಿಗಾಗಿ ನಮ್ಮ ನಡಿಗೆ ಮುಂದುವರಿಯಲಿದೆ' ಎಂದು ಮಾಹಿತಿ ನೀಡಿದರು.

‘ಫೆ.27ಕ್ಕೆ ರಾಮನಗರದಿಂದ ಬಿಡದಿ ಹಾಗೂ 28ಕ್ಕೆ ಬಿಡದಿಯಿಂದ ಕೆಂಗೇರಿಯ ವರೆಗೆ ನಿಗದಿಯಂತೆ ಕಾರ್ಯಕ್ರಮ ನಡೆಯಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ' ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರು ಮಾಜಿ ಪ್ರಧಾನಮಂತ್ರಿ ಕುಟುಂಬದವರು. ಅವರಿಗಿರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯ ಮತ್ತು ರಾಷ್ಟ್ರಕ್ಕಾಗಿ ಅವರು ಏನು ಹೇಳುತ್ತಾರೋ ಅದನ್ನೆಲ್ಲ ನಾವು ಕೇಳಬೇಕು ಅಷ್ಟೇ. ಅದನ್ನು ಯಾವುದೇ ಕಾರಣಕ್ಕೂ ಪ್ರಶ್ನಿಸಬಾರದು’ ಎಂದು ಡಿ.ಕೆ.ಸುರೇಶ್, ಪಾದಯಾತ್ರೆಗೆ ಆಕ್ಷೇಪಿಸಿದ ಎಚ್‍ಡಿಕೆ ಹೇಳಿಕೆಗೆ ಆಕ್ಷೇಪಿಸಿದರು.

‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಒತ್ತಡ ಹೇರುವ ನಿಟ್ಟಿನಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ. ಮೇಕೆದಾಟು-2.0 ಪಾದಯಾತ್ರೆಗೆ ಈ ಬಾರಿ ಹೆಚ್ಚಿನ ಜನ ಪಾಲ್ಗೊಳ್ಳಲಿದ್ದಾರೆ. ಇದು ಪಕ್ಷಾತೀತ ಹೋರಾಟ, ಜನತೆ ಬೆಂಬಲಿಸಲಿದ್ದಾರೆ' ಎಂದು ಸುರೇಶ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News