ಕೊರಗರ ಕಂದಾಯ ಸಮಸ್ಯೆಗಳಿಗೆ ತಿಂಗಳೊಳಗೆ ಪರಿಹಾರ: ಸಚಿವ ಆರ್.ಅಶೋಕ್‌

Update: 2022-02-20 14:48 GMT

ಉಡುಪಿ, ಫೆ.20: ಕಂದಾಯ ಇಲಾಖೆಗೆ ಸಂಬಂಧಿಸಿದ ಕೊರಗ ಸಮುದಾಯದ ಸಮಸ್ಯೆಗಳನ್ನು ಒಂದು ತಿಂಗಳೊಳಗೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.ಬ್ರಹ್ಮಾವರ ಕೊಕ್ಕರ್ಣೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದ್ದ ಸಚಿವರು, ಕೆಂಜೂರು ಗ್ರಾಮದ ಕೊರಗ ಸಮುದಾಯದ ಕುಮಾರ ಎಂಬವರ ಮನೆಯಲ್ಲಿ ರವಿವಾರ ಉಪಹಾರ ಸೇವಿಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡುತಿದ್ದರು.

ತಮ್ಮ ಹಿರಿಯರಿಂದ ಪಡೆದುಕೊಂಡು ಬಂದಿರುವ ಜಮೀನು ಇನ್ನು ಕೂಡ ಕೊರಗ ಸಮುದಾಯದವರ ಹೆಸರಿಗೆ ಆಗಿಲ್ಲ. ಈ ಸಮಸ್ಯೆಯನ್ನು ಒಂದು ತಿಂಗಳೊಳಗೆ ಪರಿಹರಿಸಿಕೊಡಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ಕಂಡುಕೊಂಡ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಮೊದಲ ಆದ್ಯತೆ ಪರಿಹರಿಸಿಕೊಡಲಾಗುವುದು. ಮುಂದೆ ಅದರ ಬಗ್ಗೆ ತಿಳಿದುಕೊಳ್ಳಲು ಜಿಲ್ಲಾಧಿಕಾರಿ ಜೊತೆ ಸಂಪರ್ಕ ಇಟ್ಟುಕೊಳ್ಳಲಾಗುವುದು ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಕೂಡ ಬಗೆಹರಿಸುವ ನಿಟ್ಟಿನಲ್ಲಿ ಅವುಗಳನ್ನು ಕಂದಾಯ ಇಲಾಖೆಗೆ ಬದಲಾಯಿಸಿಕೊಳ್ಳಲಾಗುವುದು. ರಾಜ್ಯದಲ್ಲಿ 15ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ಜಾಗವನ್ನು ಬಡವರಿಗೆ ಉಳುಮೆ ಮಾಡಲು ಒದಗಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಕೊರಗ ಸಮುದಾಯಕ್ಕೆ ವ್ಯವಸಾಯ ಮಾಡಲು ಸರಕಾರದಿಂದ ಸಣ್ಣಪುಟ್ಟ ಪರಿಕರಗಳನ್ನು ಒದಗಿಸಿ ಕೊಡುವ ಕಾರ್ಯ ಮಾಡಲಾಗುವುದು. ಜಿಲ್ಲಾ ಮಟ್ಟದ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಕೊರಗ ಜನಾಂಗ ಪಾಶಸ್ತ್ಯ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ತೀರ್ಮಾನ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ., ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ರಾಜು ಕೆ., ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಕಳ್ತೂರು ಗ್ರಾಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಾವು ಇನ್ನೂ ಹಿಂದುಳಿದಿದ್ದೇವೆ: ಆರ್.ಅಶೋಕ್

ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ ಹಾಗೂ ವಿಚಾರಗಳು ದೊರೆತಿವೆ. ಪರಿಶಿಷ್ಟ ಪಂಗಡಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯ ಅಂದರೆ ಕೊರಗ ಸಮುದಾಯ. ಪರಿಶಿಷ್ಟ ಜಾತಿಯವರು ಕೂಡ ಇವರನ್ನು ಹತ್ತಿರ ಸೇರಿಸುವುದಿಲ್ಲ. ಯಾವುದೇ ಸಮಾರಂಭ ನಡೆದರೂ ಊರಿನಿಂದ ಹೊರಗಡೆ ಇರುವ ಕೊರಗರ ಮನೆಯಲ್ಲಿ ಭೋಜನ, ಉಪಹಾರ ಸೇವಿಸಿ ಸಂವಾದ ಮಾಡಿದ್ದೇನೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಆಧುನಿಕ ತಂತ್ರಜ್ಞಾನ, ಮಹಾನಗರಗಳನ್ನು ನೋಡಿದಾಗ ನಮ್ಮ ರಾಜ್ಯದಲ್ಲಿ ಎಲ್ಲವೂ ಅಭಿವೃದ್ಧಿಯಾಗಿದೆ ಎಂದು ಅನಿಸುತ್ತದೆ. ಆದರೆ ವಾಸ್ತವದಲ್ಲಿ ನಾವು ಇನ್ನು ಹಿಂದುಳಿದಿದ್ದೇವೆ ಎಂದು ತಿಳಿಯುತ್ತದೆ. ಇನ್ನು ಕೂಡ ಮುಖ್ಯವಾಹಿನಿಗೆ ಬಾರದ ನೂರಾರು ಸಮುದಾಯಗಳು ನಮ್ಮಲ್ಲಿವೆ. ಇದೆಲ್ಲ ಕಂಡರೂ ಕುರುಡರಂತೆ ಇರುವ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಈ ಗ್ರಾಮ ವಾಸ್ತವ್ಯ ನನ್ನ ಕಣ್ಣು ತೆರೆಸಿದೆ. ಕೊರಗರಂತಹ ಸಮುದಾಯ ನಮ್ಮ ರಾಜ್ಯದಲ್ಲಿದೆ ಎಂಬ ಕಲ್ಪನೆಯೇ ನನಗೆ ಇರಲಿಲ್ಲ. ಇದೀಗ ಕಣ್ಣಾರೆ ನೋಡಿದ್ದೇನೆ. ಇವರ ಸಾಕಷ್ಟು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ ಎಂದರು.

ಗ್ರಾಮ ಸಹಾಯಕ ಹುದ್ದೆ ನೀಡಿ ಆದೇಶ!

ಮೊದಲ ಬಾರಿಗೆ ಎಂಬಂತೆ ಗ್ರಾಮ ಸಹಾಯಕ ಹುದ್ದೆಗೆ ಇಲ್ಲಿನ ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿ ಸರಕಾರದ ಆದೇಶ ಕೂಡ ನೀಡಿದ್ದೇನೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News