ರಾಜೀನಾಮೆ ನೀಡುವಂತಹ ತಪ್ಪು ಹೇಳಿಕೆಯನ್ನು ಈಶ್ವರಪ್ಪ ನೀಡಿಲ್ಲ ಎಂದ ಸಚಿವ ಗೋವಿಂದ ಕಾರಜೋಳ

Update: 2022-02-20 15:59 GMT

ಕೊಪ್ಪಳ, ಫೆ. 20: ‘ಹಿಜಾಬ್(ಸ್ಕಾರ್ಫ್) ವಿಚಾರ ಇದೀಗ ಹೈಕೋರ್ಟ್‍ನಲ್ಲಿದ್ದು, ಹೀಗಾಗಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು, ಅದನ್ನು ಎಲ್ಲರೂ ಪಾಲಿಸುವುದು ಕಡ್ಡಾಯವಾಗಿದೆ. ಎಲ್ಲರೂ ಆದೇಶಕ್ಕೆ ತಲೆಬಾಗಬೇಕು' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜೀನಾಮೆ ಕೊಡುವ ತಪ್ಪು ಹೇಳಿಕೆಯನ್ನು ಈಶ್ವರಪ್ಪ ನೀಡಿಲ್ಲ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದರಿಂದ ಜನರ ಅನುಕಂಪ ಗಿಟ್ಟಿಸಲು ಗಿಮಿಕ್ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ಕಾರಣಕ್ಕೂ ಲಾಭ ಆಗುವುದಿಲ್ಲ' ಎಂದು ತಿರುಗೇಟು ನೀಡಿದರು.

‘ನವಲಿ ಜಲಾಶಯಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಹಣ ಮೀಸಲಿಡುತ್ತೇವೆ. ನವಲಿ ಜಲಾಶಯಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯದ ಸಮಸ್ಯೆ ಇದೆ. ಈ ಕುರಿತಂತೆ ಎರಡೂ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇವೆ. ಮೂರು ರಾಜ್ಯದ ಸಿಎಂ ಸೇರಿ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಡಿಪಿಆರ್ ಸರ್ಕಾರದ ಕೈ ಸೇರಲಿದೆ' ಎಂದು ಹೇಳಿದರು.

‘ತುಂಗಭದ್ರಾ ಕಾಲುವೆ ಹದಗೆಟ್ಟಿದ್ದು, ನಿರ್ವಹಣಾ ವೆಚ್ಚ ತುಂಬಾ ಹಳೇ ದರವಿದೆ. ನಿರ್ವಹಣೆ ವೆಚ್ಚ ಪರಿಷ್ಕಣೆ ಮಾಡುತ್ತೇವೆ. ಟಿಬಿ ಡ್ಯಾಂನಲ್ಲಿ ಇನ್ನೂ 50 ಟಿಎಂಸಿ ನೀರಿದೆ. ಯಾವುದೇ ಸಮಸ್ಯೆ ಇಲ್ಲದಂತೆ ರೈತರಿಗೆ ನೀರು ಕೊಡುತ್ತೇವೆ. ವಿಜಯನಗರ ಕಾಲುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. ಕೆಲಸ ಮಾಡಲು ರೈತರ ಸಹಕಾರ ಮುಖ್ಯ. ಕೊನೆಭಾಗದ ರೈತರಿಗೆ ನೀರು ಒದಗಿಸಲು ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. 122ಕೆರೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News