ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಶವಯಾತ್ರೆ ವೇಳೆ ಹಿಂಸಾಚಾರ: ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ

Update: 2022-02-21 12:22 GMT

ಶಿವಮೊಗ್ಗ: ದುಷ್ಕರ್ಮಿಗಳಿಂದ ರವಿವಾರ ರಾತ್ರಿ ಹತ್ಯೆಗೀಡಾಗಿದ್ದ ಹರ್ಷ ಶವಯಾತ್ರೆ ವೇಳೆ ಹಿಂಸಾಚಾರ ನಡೆದಿದೆ ,ಈ ವೇಳೆ ಹಲವು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.

ಸೆಕ್ಷನ್ 144 ನಡುವೆಯೂ ಆಸ್ಪತ್ರೆಯಿಂದ ಮನೆಗೆ ಶವಯಾತ್ರೆ ನಡೆಸುವ ವೇಳೆ ಅಹಿತಕರ ಘಟನೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ. ಆಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಚದುರಿಸಲು ಯತ್ನಿಸಿದ್ದಾರೆ.

ಶವಯಾತ್ರೆ ಗಾಂಧಿ ಬಝಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.

ಕಲ್ಲು ತೂರಾಟದಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

ಇನ್ನು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಈ ನಡುವೆ  ಶಿವಮೊಗ್ಗ ನಗರ ಶಾಸಕ , ಸಚಿವ ಈಶ್ವರಪ್ಪ ಅವರು ಹರ್ಷ ಮನೆಗೆ ಭೇಟಿ ನೀಡಿ ಅಲ್ಲಿಂದ ಈಶ್ವರಪ್ಪ ನೇತೃತ್ವದಲ್ಲಿ  ರೋಟರಿ ಚಿತಾಗಾರಕ್ಕೆ ಮೆರವಣಿಗೆ ನಡಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News