×
Ad

ವರದಕ್ಷಿಣೆ ಸಾವು ಪ್ರಕರಣ: ಆರೋಪಿಗಳಿಗೆ ಜಾಮೀನು ನೀಡಿದ ನ್ಯಾಯಾಧೀಶರಿಗೆ ತರಬೇತಿ ನೀಡುವಂತೆ ಹೈಕೋರ್ಟ್ ಆದೇಶ

Update: 2022-02-21 17:58 IST

ಬೆಂಗಳೂರು, ಫೆ.21: ವರದಕ್ಷಿಣೆ ಕಿರುಕುಳ ಸಾವು ಪ್ರಕರಣದ ಇಬ್ಬರು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಮೈಸೂರು ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಂಗ ಅಕಾಡಮಿಯಲ್ಲಿ ತರಬೇತಿ ನೀಡುವಂತೆ ಆದೇಶಿಸಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸುನಿಲ್‍ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ಪೀಠ, ಈ ತೀರ್ಪು ನೀಡಿದೆ. ಇದೇ ವೇಳೆ ಪ್ರಕರಣದ ಆರೋಪಿಗಳಾದ ಮಂಜು(ಪತಿ) ಹಾಗೂ ಶಿವಮ್ಮ(ಅತ್ತೆ) ಎಂಬುವರಿಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.

ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡುವ ಮುನ್ನ ನ್ಯಾಯಾಂಗ ವಿವೇಚನೆ ಬಳಸುವುದನ್ನು ನ್ಯಾಯಾಧೀಶರು ತಿಳಿಯಬೇಕಿದೆ. ಹೀಗಾಗಿ, ಮೈಸೂರಿನ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡಮಿಗೆ ಕಳುಹಿಸಿ ಎಂದು ನಿರ್ದೇಶಿಸಿದೆ.

ಪ್ರಕರಣವೇನು: ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಸುನಿತಾ ಹಾಗೂ ಮಂಜು ಎಂಬುವರ ಮದುವೆ 2020ರ ಫೆ.16ರಂದು ನಡೆದಿತ್ತು. ಮದುವೆಯಾದ ಎರಡು ತಿಂಗಳಲ್ಲೇ ಮನೆ ನಿರ್ಮಾಣ ಮಾಡುವುದಾಗಿ ಹೇಳಿದ್ದ ಪತಿ ಮಂಜು, ಪತ್ನಿ ಸುನೀತಾಗೆ ತವರಿನಿಂದ 6 ಲಕ್ಷ ರೂಪಾಯಿ ತರುವಂತೆ ಜಗಳ ಮಾಡಿ ತವರಿಗೆ ಕಳುಹಿಸಿದ್ದ. ಬಳಿಕ ಪೋಷಕರು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದರೂ, ಬೆಳೆ ಕೈಕೊಟ್ಟಿದ್ದರಿಂದ ಭರವಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ, ಮತ್ತಷ್ಟು ಸಿಟ್ಟಿಗೆದ್ದಿದ್ದ ಮಂಜು, ಸುನಿತಾಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತೆ ಪೀಡಿಸುತ್ತಿದ್ದ. 2021ರ ಫೆ.14ರಂದು ಸುನಿತಾ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು.

ಸುನಿತಾ ಸಾವಿನ ಬಳಿಕ ಆಕೆ ಸಾವಿಗೆ ಮುನ್ನವೇ ತನ್ನ ತವರಿನ ನೆರೆಮನೆಯವರ ಮೊಬೈಲ್‍ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಬೆಳಕಿಗೆ ಬಂದಿತ್ತು. ಪತಿ ಮಂಜು ಮೊಬೈಲ್‍ನಿಂದ ಕಳುಹಿಸಿದ್ದ ವಾಯ್ಸ್ ಮೆಸೇಜ್‍ನಲ್ಲಿ ತನಗೆ ಏನಾದರೂ ತೊಂದರೆಯಾದರೆ, ಅದಕ್ಕೆ ಪತಿ ಮಂಜು, ಅತ್ತೆ ಶಿವಮ್ಮ ಹಾಗೂ ಮಾವ ರಾಜಪ್ಪರೇ ಜವಾಬ್ದಾರರು ಎಂದಿತ್ತು. ಈ ಮೆಸೇಜ್ ಸಿಕ್ಕ ಬಳಿಕ ಸುನಿತಾ ಸಹೋದರ ಸುನಿಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ 5ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2021ರ ಎಪ್ರಿಲ್‍ನಲ್ಲಿ ಆರೋಪಿಗಳಿಗೆ ಜಾಮೀನು ನೀಡಿತ್ತು. ಬಳಿಕ, ಜಾಮೀನನ್ನು ರದ್ದು ಕೋರಿ ಸುನಿಲ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News