×
Ad

ಯಾವುದೇ ಸಂಘಟನೆಗಳ ಕೈವಾಡವಿಲ್ಲ, ಸಣ್ಣಪುಟ್ಟ ವೈರತ್ವವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ ಎಂದ ಸಚಿವ ನಾರಾಯಣ ಗೌಡ

Update: 2022-02-21 23:25 IST
 ಸಚಿವ ಡಾ.ನಾರಾಯಣ ಗೌಡ                                                               ಹರ್ಷ

ಶಿವಮೊಗ್ಗ, ಫೆ.21:  ಹರ್ಷ ಹತ್ಯೆ ಪ್ರಕರಣದಲ್ಲಿ ಯಾವುದೇ ಸಂಘಟನೆಗಳ ಕೈವಾಡವಿಲ್ಲ, ಸಣ್ಣಪುಟ್ಟ ವೈರತ್ವವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ತನಿಖೆಯಿಂದ‌ ಸತ್ಯಾಂಶ ಹೊರಬರಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ. 

ಸೋಮವಾರ ಸಿಗೇಹಟ್ಟಿ ಹರ್ಷ ನಿವಾಸಕ್ಕೆ ಭೇಟಿ ನೀಡಿದ ಸಚಿವರು,  ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು‌.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ತಕ್ಷಣ ಜಿಲ್ಲಾಧಿಕಾರಿ ಡಾ.ಸೆಲ್ವಾಮಣಿ, ಐಜಿ , ಎಸ್‌ಪಿ ಲಕ್ಷ್ಮೀ ಪ್ರಸಾದ್ ಅವರ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ, ಶಾಂತಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದು ರಾತ್ರಿ ಖುದ್ದು ಇಲ್ಲೇ ಇದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ. 

ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರ ಮೇಲೆ ಅನುಮಾನವಿದ್ದು,ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ತಣದಲ್ಲಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು. 

ಹರ್ಷ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಒಬ್ಬನೇ ಮಗ ಇದ್ದಿದ್ದು, ಅವರ ಕುಟುಂಬದ ನಾವು ಜೊತೆ ಇರ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ರಾಜ್ಯದ ಸಾಮರಸ್ಯ ಹಾಳು ಮಾಡುವ ಕಿಡಿಗೇಡಿಗಳ ಹೆಡೆಮುರಿ ಕಟ್ಟುತ್ತೇವೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News