×
Ad

ವಿಡಿಯೋಗಾಗಿ ವಿದ್ಯಾರ್ಥಿಗಳು, ಶಿಕ್ಷಕರ ಬೆನ್ನು ಬೀಳದಂತೆ 60 ಮಾಧ್ಯಮ ಸಂಸ್ಥೆಗಳ ವಿರುದ್ಧ ಹೈಕೋರ್ಟ್ ಗೆ ಅರ್ಜಿ

Update: 2022-02-22 13:07 IST

ಬೆಂಗಳೂರು: ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ತೆರಳುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಹಿಂದೆ ತೆರಳಿ ಅವರ ವೀಡಿಯೋ ಚಿತ್ರೀಕರಣವನ್ನು ಮಾಧ್ಯಮಗಳು ನಡೆಸುವುದನ್ನು ನಿರ್ಬಂಧಿಸಬೇಕೆಂದು ಕೋರಿ 60ಕ್ಕೂ ಅಧಿಕ ಮಾಧ್ಯಮ ಸಂಸ್ಥೆಗಳ ವಿರುದ್ಧ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಮಾಧ್ಯಮ ಸಂಸ್ಥೆಗಳ ಹೊರತಾಗಿ ಫೇಸ್ಬುಕ್, ಟ್ವಿಟರ್, ಗೂಗಲ್, ಯಾಹೂ ಮತ್ತು ಇನ್‍ಸ್ಟಾಗ್ರಾಂ, ಯುಟ್ಯೂಬ್ ಮತ್ತು ವಾಟ್ಸ್ ಆ್ಯಪ್ ಇವುಗಳನ್ನೂ ಪ್ರತಿವಾದಿಗಳೆಂದು ಹೆಸರಿಸಲಾಗಿದೆ.

ಅಬ್ದುಲ್ ಮನ್ಸೂರ್, ಮುಹಮ್ಮದ್ ಖಲೀಲ್ ಮತ್ತು ಆಸಿಫ್ ಅಹ್ಮದ್ ಎಂಬವರು ಸಲ್ಲಿಸಿರುವ ಈ ಪಿಐಎಲ್ ಸಲ್ಲಿಸಿದವರು. ಮಾಧ್ಯಮ ಸಂಸ್ಥೆಗಳು ಕೆಲ ಸ್ಥಾಪಿತ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರನ್ನು ಅವಮಾನಿಸುತ್ತಿದೆಯಲ್ಲದೆ ಅವರ ಧರ್ಮ, ನಂಬಿಕೆ, ಗುರುತು ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಿವೆ ಎಂದು ಪಿಐಎಲ್‍ನಲ್ಲಿ ದೂರಲಾಗಿದೆ.

"ಅಂತಿಮವಾಗಿ ಹಿಂಸಾತ್ಮಕ ಕ್ರಮ ಮತ್ತು ಪ್ರತಿಕ್ರಮಗಳಿಗೆ ಕಾರಣವಾಗುವ ದ್ವೇಷ, ಅಗೌರವ ಮತ್ತು  ಸೇಡಿನ ವಿಷಯನ್ನು ತುಂಬಿ ವಿದ್ಯಾರ್ಥಿ ಸಮುದಾಯವನ್ನು ಧ್ರುವೀಕರಿಸಲು, ವಿಭಜಿಸಲು ಮತ್ತು ಕೋಮುವಾದಿಯನ್ನಾಗಿಸಲು ಸತತ ಯತ್ನಗಳನ್ನು ನಡೆಸಲಾಗುತ್ತಿದೆ,'' ಎಂದು ಪಿಐಎಲ್‍ನಲ್ಲಿ ವಿವರಿಸಲಾಗಿದೆ.

ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿ ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಸಾರ್ವಜನಿಕವಾಗಿ ಶಾಲಾ ಗೇಟುಗಳ ಹೊರಗೆ ನಿಲ್ಲಿಸಿ ಹಿಜಾಬ್, ಬುರ್ಖಾ ತೆಗೆಯುವಂತೆ ಮಾಡುವ ಮೂಲಕ ಅವರನ್ನು ಅವಮಾನಿಸುತ್ತಿರುವ ರೀತಿಯಿಂದ ಮುಸ್ಲಿಂ ಸಮುದಾಯದ ಸದಸ್ಯರಿಗೆ ನೋವುಂಟಾಗಿದೆ,'' ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

"ಕಳೆದ ಒಂದು ತಿಂಗಳಿನಿಂದ ಕ್ಯಾಮರಾಮೆನ್‍ಗಳು ಮತ್ತು ವರದಿಗಾರರು ಶಾಲಾ ಕಾಲೇಜುಗಳ ಆವರಣಗಳ ಒಳಗೆ ಮತ್ತು ಸುತ್ತಮುತ್ತ  ಇದ್ದುಕೊಂಡು ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಂತೆ ಅವರ ಹಿಂದೆ ಬಿದ್ದು ಫೋಟೋ, ವೀಡಿಯೋ ತೆಗೆಯುವುದಲ್ಲದೆ ಅವರು ಹಿಜಾಬ್ ತೆಗೆಯುವ ವೇಳೆಯೂ ಚಿತ್ರೀಕರಣ ನಡೆಸಿ ಅವರನ್ನು ಅವಮಾನಿಸುವುದಲ್ಲದೆ ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ಗೌಣವಾಗಿಸಿದ್ದಾರೆ,'' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News