ವಿಧಾನಸಭೆ ಅಧಿವೇಶನ: ಮಾ.4ಕ್ಕೆ ಕಲಾಪ ಮುಂದೂಡಿದ ಸ್ಪೀಕರ್
ಬೆಂಗಳೂರು, ಫೆ.22: ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಸಚಿವ ಕೆ.ಎಸ್.ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿ ಮುಂದುವರೆಸಿದ್ದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನವನ್ನು ಮಾ.4ರಂದು ಸೇರುವಂತೆ ಮುಂದೂಡಿದರು. ಆ ಮೂಲಕ ವಿಧಾನಸಭೆ ಅಧಿವೇಶನವು ಮೂರು ದಿನ ಮೊದಲೆ ಮೊಟಕುಗೊಂಡಿತು.
ಪೂರ್ವ ನಿಗದಿಯಂತೆ ಅಧಿವೇಶನವನ್ನು ಫೆ.14 ರಿಂದ 25ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿಯು ಐದನೆ ದಿನಕ್ಕೆ ಕಾಲಿಟ್ಟಿದ್ದು, ಈಶ್ವರಪ್ಪ ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಅವರನ್ನು ಸಂಪುಟದಿಂದ ವಜಾಗೊಳಿಸಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸುವವರೆಗೆ ಹೋರಾಟ ಹಿಂಪಡೆಂಯುವುದಿಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದ್ದರಿಂದ ಸ್ಪೀಕರ್ ಸದನವನ್ನು ಮುಂದೂಡಿದರು.
ಕಾಂಗ್ರೆಸ್ ಸದಸ್ಯರ ಗಲಾಟೆ, ಗದ್ದಲದ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸರಕಾರದ ಉತ್ತರ ನೀಡಿದರು. ಅಲ್ಲದೇ, ಸದನದಲ್ಲಿ 2022ನೆ ಸಾಲಿನ ಕರ್ನಾಟಕ ಮಂತ್ರಿಗಳ ಸಂಬಳಗಳೂ ಮತ್ತು ಭತ್ತೆಗಳು ತಿದ್ದುಪಡಿ ವಿಧೇಯಕ ಹಾಗೂ 2022ನೆ ಸಾಲಿನ ಕರ್ನಾಟಕ ವಿಧಾನಮಂಡಲದ ಸದಸ್ಯರ ವೇತನ, ನಿವೃತ್ತಿ ವೇತನ ಮತ್ತು ಭತ್ತೆಗಳ ವಿಧೇಯಕಕ್ಕೆ ಅನುಮೋದನೆ ಲಭಿಸಿತು.
ಮಂಗಳವಾರವೂ ಸದನ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ‘ದೇಶದ್ರೋಹಿ ಯಾರಪ್ಪ?-ಬಿಜೆಪಿ ಈಶ್ವರಪ್ಪ, ನಡ್ಡಾ ಹೇಳಿದ್ದು ಏನಪ್ಪಾ?-ಈಶ್ವರಪ್ಪ ದೇಶದ್ರೋಹಿ, ವಜಾ ಮಾಡಿ ವಜಾ ಮಾಡಿ-ಈಶ್ವರಪ್ಪ ವಜಾ ಮಾಡಿ, ಮನುಸ್ಮøತಿ ಬೇಡ-ಸಂವಿಧಾನ ಬೇಕು, ಗೋಡ್ಸೆ ಬೇಡ-ಗಾಂಧೀಜಿ ಬೇಕು, ಆಗಬೇಡಿ, ಆಗಬೇಡಿ-ಮನುವಾದಿ ಆಗಬೇಡಿ, ಮಾತನಾಡಿ ಮಾತನಾಡಿ-ಸ್ಪೀಕರ್ ಮಾತನಾಡಿ, ನ್ಯಾಯ ಕೊಡಿ ನ್ಯಾಯ ಕೊಡಿ-ಸ್ಪೀಕರ್ ನ್ಯಾಯ ಕೊಡಿ, ಬೆಂಕಿ ಹಚ್ಚುವವರು ಯಾರಪ್ಪ-ಬಿಜೆಪಿ ಈಶ್ವರಪ್ಪ, ಕೈಗೊಂಬೆ ಕೈಗೊಂಬೆ-ಆರೆಸ್ಸೆಸ್ ಕೈಗೊಂಬೆ ಎಂದು ಘೋಷಣೆಗಳನ್ನು ಕೂಗುತ್ತಿದ್ದರು.
ಈ ನಡುವೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗಾಗಲೆ ಸದನದ ಐದು ದಿನಗಳು ಹಾಳಾಗಿವೆ. ಇನ್ನುಳಿದ ಮೂರು ದಿನಗಳಾದರೂ ಚರ್ಚೆಯಲ್ಲಿ ಭಾಗವಹಿಸಿ, ಕಲಾಪಗಳು ಸುಸೂತ್ರವಾಗಿ ನಡೆಯಲು ಸಹಕಾರ ನೀಡಿ. ನೀವು ನನ್ನ ಮಾತನ್ನು ಕೇಳದಿದ್ದರೆ ನಾನು ನನ್ನ ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮ ಭಿನ್ನಾಭಿಪ್ರಾಯಗಳಿಗೆ ಸದನದ ಹೊರಗಡೆ ಪ್ರತಿಭಟನೆಗಳನ್ನು ನಡೆಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸದೆ ಇದ್ದಿದ್ದರಿಂದ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ನಡೆಸಲಾಯಿತು. ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಕಾಂಗ್ರೆಸ್ ಸದಸ್ಯರ ಧರಣಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‍ನವರು ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ವಿಪಕ್ಷವನ್ನು ನಾನು ನೋಡಿಲ್ಲ. ಇವರು ರಾಜ್ಯಕ್ಕೆ, ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇವರ ಕೆಲಸವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ ಅವುಗಳ ಬಗ್ಗೆ ಚರ್ಚೆ ನಡೆಸಲಿ. ಮಕ್ಕಳು ಆತಂಕದಲ್ಲಿದ್ದಾರೆ. ಅವರ ಮನಸ್ಸಿನಲ್ಲಿರುವ ಗೊಂದಲವನ್ನು ನಾವು ಸೇರಿ ಬಗೆಹರಿಸಬೇಕು. ಹೈಕೋರ್ಟ್ ಕೊಟ್ಟಿರುವ ಮಧ್ಯಂತರ ಆದೇಶವನ್ನು ಪಾಲನೆ ಮಾಡುವಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಕಷ್ಟಕಾಲದಲ್ಲಿ ರಾಜಕೀಯ ಪಕ್ಷಗಳೆಲ್ಲ ಒಂದಾಗಿ ಹೋಗುವುದು ನಮ್ಮ ರಾಜ್ಯದ ಪರಂಪರೆ. ಆದರೆ, ಇವರು ಆ ಪರಂಪರೆಗೂ ಗೌರವ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.
ಷಡ್ಯಂತ್ರದ ಕೊಲೆ: ಶಿವಮೊಗ್ಗದಲ್ಲಿ ಷಡ್ಯಂತ್ರ ಮಾಡಿ ಒಬ್ಬ ಯುವಕನನ್ನು ಕೊಲೆ ಮಾಡಲಾಗಿದೆ. ಅದಕ್ಕೆ ಯಾರು ಜವಾಬ್ದಾರರು. ರಾಜ್ಯದಲ್ಲಿ ಕ್ಷೋಭೆ ಉಂಟು ಮಾಡುವುದು ಇವರ ಉದ್ದೇಶ. ಶಾಂತಿ ಭಂಗ ಮಾಡಲು ನೀವು ನಡೆಸುತ್ತಿರುವ ಪ್ರಯತ್ನವನ್ನು ನೋಡುತ್ತಿರುವ ಜನ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಕ್ಷುಬ್ಧ ವಾತಾವರಣ ತಿಳಿಗೊಳಿಸಲು ಸರಕಾರದ ಜೊತೆ, ಸಮಾಜ, ವಿರೋಧ ಪಕ್ಷ ಎಲ್ಲರೂ ಕೈ ಜೋಡಿಸಬೇಕು. ಆದರೆ, ವಾತಾವರಣವನ್ನು ಮತ್ತಷ್ಟು ಕೆಡಿಸಲು ಪ್ರಯತ್ನಿಸುತ್ತಿರುವ ನಿಮ್ಮನ್ನು ಮುಂದಿನ ದಿನಗಳಲ್ಲಿ ಸಮಯ ಸರಿಯಾದ ಪಾಠ ಕಲಿಸುತ್ತದೆ. ನೀವು ಇತಿಹಾಸದ ಕಪ್ಪುಚುಕ್ಕೆಯಾಗುತ್ತೀರಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ನಿಮ್ಮ(ಸ್ಪೀಕರ್) ಮನವಿಗೂ ಅವರು ಗೌರವ ನೀಡುತ್ತಿಲ್ಲ. ಕೇವಲ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ನಿರೀಕ್ಷೆಯಂತೆ ಅವರಿಗೆ ಯಾವುದೆ ಲಾಭ ಸಿಗುವುದಿಲ್ಲ. ಬದಲಾಗಿ ನಷ್ಟವೇ ಆಗುತ್ತದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.