'ಮನುವಾದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ' ಎಂದು ಬ್ಯಾನರ್ ಹಾಕಿದ ದಲಿತ ಸಂಘಟನೆ

Update: 2022-02-22 08:28 GMT

ಬೆಂಗಳೂರು: ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಗೌಡಪಾಟೀಲ ವಜಾಕ್ಕೆ ಒತ್ತಾಯಿಸಿ ಇತ್ತೀಚೆಗೆ  ದಲಿತಪರ ಸಂಘಟನೆ, ಪ್ರಗತಿಪರರು, ಚಿಂತಕರು ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆಯ ಸುದ್ದಿ ಪ್ರಸಾರ ಮಾಡದೇ ಇರುವ ಕೆಲವೊಂದು ಸುದ್ದಿ ಮಾಧ್ಯಮಗಳ ವಿರುದ್ಧ ಇದೀಗ ಸಾರ್ವಜನಿಕವಾಗಿ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.  

'ದಲಿತ ಪರ ಹೋರಾಟಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡದ ದಲಿತ ವಿರೋಧಿ ಕನ್ನಡ ಸುದ್ದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ,  ದಲಿತರೆಲ್ಲರೂ ಕನ್ನಡದ ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿ' ಎಂದು ಕರೆ ನೀಡಿರುವ ಬ್ಯಾನರ್ ಒಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಎಂಬಲ್ಲಿ ಕಂಡು ಬಂದಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ #BoycottManuwadiMedia ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನ ಆರಂಭಿಸಿದ್ದು,  ಫೇಸ್ ಬುಕ್ ಹಾಗೂ ಟ್ವಟಿರ್ ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಗಳನ್ನು ಹಂಚಿದ್ದಾರೆ. 

ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿ ಅಪಮಾನಗೈದ ಘಟನೆಯೂ ನಮ್ಮ ಕಣ್ಣು ತೆರೆಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News